ಕೊಲ್ಕತ್ತಾದಲ್ಲಿ ವೈದ್ಯೆಯ ಕೊಲೆ ಪ್ರತಿಭಟಿಸಿ ವೈದ್ಯರ ಮುಷ್ಕರ: ದೇಶಾದ್ಯಂತ ಆಸ್ಪತ್ರೆಗಳ ಸೇವೆ ಸ್ತಬ್ದ, ಸಂಕಷ್ಟಕ್ಕೊಳಗಾದ ರೋಗಿಗಳು
ಕಾಸರಗೋಡು: ಕೊಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೀನ ದುಷ್ಕೃತ್ಯವನ್ನು ಪ್ರತಿಭಟಿಸಿ ದೇಶದ ಎಲ್ಲಾ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರುಗಳು ಇಂದು ಬೆಳಿಗ್ಗೆ 6 ಗಂಟೆಯಿಂದ ದೇಶಾದ್ಯಂತವಾಗಿ ಮುಷ್ಕರದಲ್ಲಿ ತೊಡಗಿದ್ದು, ಇದರಿಂದಾಗಿ ಎಲ್ಲಾ ಆಸ್ಪತ್ರೆಗಳ ಸೇವೆಗಳು ಸ್ತಬ್ದಗೊಂಡಿದೆ. ತುರ್ತು ವೈದ್ಯಕೀಯ ಸೇವೆಯನ್ನು ಹೊರತುಪಡಿಸಿ ಉಳಿದ ಯಾವುದೇ ಸೇವೆಗಳು ಇಂದು ಯಾವುದೇ ಆಸ್ಪತ್ರೆಯಲ್ಲಿ ಲಭಿಸುತ್ತಿಲ್ಲ. ಈ ಮುಷ್ಕರ ನಾಳೆ ಬೆಳಿಗ್ಗೆ ೬ ಗಂಟೆ ತನಕ ಮುಂದುವರಿಯಲಿದೆ.
ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗ (ಒಪಿಟಿ) ಇಂದು ಪೂರ್ಣ ಬಂದ್ ಆಗಿದ್ದು ಎಮರ್ಜೆನ್ಸಿ ಪೇಶೆಂಟ್‌ಗಳಿಗೆ ಮಾತ್ರವೇ ಚಿಕಿತ್ಸೆ ನೀಡಲಾಗುವುದೆಂದು ವೈದ್ಯರ ಸಂಘಟನೆ ತಿಳಿಸಿದೆ. ಎಲ್ಲಾ ವೈದ್ಯರುಗಳು ಹೊರರೋಗಿ ವಿಭಾಗದ ಸೇವೆಗಳಲ್ಲಿ ಹಾಜರಾಗದೆ ಮುಷ್ಕರದಲ್ಲಿ ತೊಡಗಿದ್ದಾರೆ. ಇನ್ನು ಸರಕಾರಿ ವೈದ್ಯರು ತಮ್ಮ ಕೈಗೆ ಕಪ್ಪು ಪಟ್ಟಿ ಧರಿಸಿ ತುರ್ತು ಸೇವಾ ವಿಭಾಗ (ಎಮರ್ಜೆನ್ಸಿ) ಸೇವೆ ನೀಡುತ್ತಿದ್ದಾರೆ. ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೀಡಿದ ಕರೆಯಂತೆ ಈ ಮುಷ್ಕರ ನಡೆಯುತ್ತಿದೆ. ಮುಷ್ಕರದಿಂದಾಗಿ ಭಾರತದ ಯಾವುದೇ ಆಸ್ಪತ್ರೆಗಳಲ್ಲಿ 24 ತಾಸುಗಳ ತನಕ ಹೊರ ರೋಗಿ ವಿಭಾಗದ ಹಾಗೂ ಶಸ್ತ್ರಕ್ರಿಯೆ ಸೇವೆ ಲಭಿಸದೆಂದು ಸಂಘಟನೆ ತಿಳಿಸಿದೆ. ಇಂದಿನ ಈ ಮುಷ್ಕರಕ್ಕೆ ಆರೋಗ್ಯ ರಂಗದ ಹೆಚ್ಚಿನ ಎಲ್ಲಾ ಸಂಘಟನೆಗಳು ಬೆಂಬಲ ನೀಡುತ್ತಿವೆ.
ವೈದ್ಯರುಗಳ ಈ ೨೪ತಾಸುಗಳ ಮುಷ್ಕರದಂಗವಾಗಿ ಮುಷ್ಕರ ನಿರತ ಕಾಸರಗೋಡು ಜಿಲ್ಲೆಯ ಮುಷ್ಕರ ನಿರತ ವೈದ್ಯರುಗಳು ಇಂದು ಬೆಳಿಗ್ಗೆ ಐಎಂಎ ನೇತೃತ್ವದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆ ಮತ್ತು ಹೊಸದುರ್ಗದಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಧರಣಿ ಮುಷ್ಕರ ಹೂಡಿ ಪ್ರತಿಭಟನಾ ಸಭೆ ನಡೆಸಿದರು. ಆರೋಗ್ಯ ಕಾರ್ಯಕರ್ತರಿಗೆ ಸೇವೆ ವೇಳೆ ಭದ್ರತೆಯ ಭರವಸೆ ನೀಡಬೇಕು, ಕೋಲ್ಕತ್ತಾದ ಟ್ರೈನಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಹಂತಕರನ್ನು ಶೀಘ್ರ ಬಂಧಿಸಿ ಕಾನೂನು ಪರ ಕಠಿಣ ಶಿಕ್ಷಾ ಕ್ರಮ ಕೈಗೊಳ್ಳಬೇಕು, ಆಸ್ಪತ್ರೆಗಳು ಮತ್ತು ಆರೋಗ್ಯ ಕಾರ್ಯ ಕರ್ತರ ಮೇಲೆ ನಡೆಯುತ್ತಿರುವ ದಾಳಿ ಮತ್ತು ಗೂಂಡಾಗಿರಿಯನ್ನು ಕೊನೆಗೊಳಿಸಲು ಕಠಿಣ ಕ್ರಮ ಕೈಗೊಳ್ಳಬೇಕು, ಇದರ ಜೊತೆಗೆ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳಿಗೂ ಸಂರಕ್ಷಣೆ ಒದಗಿಸಬೇಕೆಂಬ ಬೇಡಿಕೆಯನ್ನು ಐಎಂಎ ಮುಂದಿರಿಸಿದೆ.
ವೈದ್ಯರ ಮುಷ್ಕರದಿಂದಾಗಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳು ತೀವ್ರ ಸಂಕಷ್ಟ ಎದುರಿಸಬೇಕಾಗಿ ಬಂದಿದೆ. ಮುಷ್ಕರದ ಬಗ್ಗೆ ಪೂರ್ವ ಮಾಹಿತಿ ಲಭಿಸದ ಅದೆಷ್ಟೋ ರೋಗಿಗಳು ಚಿಕಿತ್ಸೆ ಲಭಿಸದೆ ಸಂಕಟದಿಂದ ಮರಳುವ ದೃಶ್ಯಗಳೂ ಹಲವು ಆಸ್ಪತ್ರೆಗಳಲ್ಲಿ ಗೋಚರಿಸುತ್ತಿವೆ.