ಕಾಸರಗೋಡು: ಕೊಲ್ಲಂ ಕಲ್ಲುವಾದುಕ್ಕಲ್‌ನಲ್ಲಿ ಪತಿಯಿಂದ ಹತ್ಯೆಗೀಡಾದ ಯುವತಿಯ ಮೃತದೇಹವನ್ನು ಬಂದಡ್ಕದ ಮನೆಗೆ ತಲುಪಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆಯ ಬಳಿಕ ರತಿ ಅಲಿಯಾಸ್ ರೇವತಿ (39)ರ ಮೃತದೇಹವನ್ನು ಇಂದು ಬೆಳಿಗ್ಗೆ ಬಂದಡ್ಕ ಪೇಟೆ ಸಮೀಪದ ಮನೆಗೆ ತರಲಾಗಿದೆ. ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ತರುವಾಗ ಈಕೆಯ ಮಕ್ಕಳಾದ ಜೆ. ಬಿಜಿನ್, ಆರ್. ಎಜಿನ್ ಜೊತೆಗಿದ್ದರು.
ಗುರುವಾರ ರಾತ್ರಿ 11 ಗಂಟೆ ವೇಳೆ ರತಿ ರಲ್ಲುವಾದುಕ್ಕಲ್ ತಾನಿಮುಖ್ ಸಮೀಪದ ಶಾನವಾಸ್ ಮಂಜಿಲ್‌ನಲ್ಲಿ ಕೊಲೆಗೀಡಾಗಿದ್ದರು. ಆ ಮನೆಯ ಮಾಲಕನಿಗೆ ಶುಶ್ರೂಷೆ ನೀಡಲು ರತಿ ಆ ಮನೆಯಲ್ಲಿ ತಂಗಿದ್ದರು. ರಾತ್ರಿ 11 ಗಂಟೆ ವೇಳೆಗೆ ಬೈಕ್‌ನಲ್ಲಿ ಸ್ಥಳಕ್ಕೆ ಬಂದ ಪತಿ ಜಿನು ಮನೆಗೆ ನುಗ್ಗಿ ಪತ್ನಿಯನ್ನು ಇರಿದಿದ್ದಾನೆ. ಬೊಬ್ಬೆ ಕೇಳಿ ತಲುಪಿದ ಪರಿಸರ ನಿವಾಸಿಗಳು ರತಿಯನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಘಟ ನೆಯ ಬಳಿಕ ಅಲ್ಲಿಂದ ಪರಾರಿಯಾದ ಜಿನುವನ್ನು ಶೂರನಾಡ್‌ನಲ್ಲಿ ಪೊಲೀಸರು ಸೆರೆ ಹಿಡಿದಿದ್ದಾರೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾ ಯಿತು. ಫೋನ್ ಮೂಲಕ ಜಿನು ಹಾಗೂ ರತಿ ಪರಿಚಿತಗೊಂಡಿದ್ದರು. 2011ರಿಂದ ಇವರಿಬ್ಬರು ಜೊತೆಯಲ್ಲಿ ವಾಸಿಸುತ್ತಿದ್ದರು. ಒಂದು ತಿಂಗಳ ಹಿಂದೆ ರತಿ ತವರೂರು ಬಂದಡ್ಕಕ್ಕೆ ಬಂದು ಹಿಂತಿರುಗಿದ್ದರು. ಇತ್ತೀಚೆಗೆ ಜಿನು ಹಾಗೂ ರತಿ ಮಧ್ಯೆ ವೈಮನಸ್ಸು ಉಂಟಾಗಿತ್ತು. ಇದು ಕೊಲೆಗೆ ಕಾರಣವಾಗಿರಬೇಕೆಂದು ಪೊಲೀಸರು ಶಂಕಿಸುತ್ತಿದ್ದಾರೆ.