ಕೊಲ್ಲಂನಲ್ಲಿ ಸಿಪಿಎಂ-ಸಿಪಿಐ ಮಧ್ಯೆ ಭಿನ್ನಾಭಿಪ್ರಾಯ ತೀವ್ರ: ಕಾರ್ಪೊರೇಷನ್‌ನ ಡೆಪ್ಯುಟಿ ಮೇಯರ್, ಸ್ಥಾಯಿ ಸಮಿತಿಗೆ ಸಿಪಿಐ ರಾಜೀನಾಮೆ
ಕೊಲ್ಲಂ: ಎಡರಂಗ ಆಡಳಿತ ದಲ್ಲಿರುವ ಕೊಲ್ಲಂ ಕಾರ್ಪೊರೇಷನ್‌ನ ಡೆಪ್ಯುಟಿ ಮೇಯರ್, ಸಿಪಿಐ ಪ್ರತಿನಿಧಿಯಾದ ಮಧು ಸಹಿತ ಸಿಪಿಐಯ ಇಬ್ಬರು ಸ್ಥಾಯಿ ಸಮಿತಿ ಅಧ್ಯಕ್ಷರು ರಾಜೀನಾಮೆ ನೀಡಿದರು. ಕಾರ್ಪೊರೇಷನ್ ಚುನಾವಣೆಯ ಹಿನ್ನೆಲೆಯಲ್ಲಿ ಮಾಡಿಕೊಂಡ ಒಪ್ಪಂದ ಪ್ರಕಾರ ಕಾರ್ಪೊರೇಷನ್ ಮೇಯರ್ ಸ್ಥಾನವನ್ನು ಎರಡೂ ಪಕ್ಷಗಳು ಹಂಚಿಕೊಳ್ಳಬೇ ಕೆಂದಾಗಿತ್ತು. ಮೊದಲಾರ್ಧದಲ್ಲಿ ಮೇಯರ್ ಆದ ಸಿಪಿಎಂನ ಪ್ರಸನ್ನ ಏನಸ್ ಈ ಒಪ್ಪಂದ ಪ್ರಕಾರ ನಿನ್ನೆ ರಾಜೀನಾಮೆ ನೀಡಬೇಕಾಗಿತ್ತು.
ಆ ಬಳಿಕ ಸಿಪಿಐಗೆ ಮೇಯರ್ ಸ್ಥಾನವನ್ನು ನೀಡಬೇಕಾಗಿತ್ತು. ಆದರೆ ನಿನ್ನೆ 5 ಗಂಟೆವರೆಗೆ ಅವರು ಒಪ್ಪಂದವನ್ನು ಪಾಲಿಸಲಿಲ್ಲ. ಮಾತ್ರವಲ್ಲ, ತಾನು ಮೇಯರ್ ಸ್ಥಾನ ವಹಿಸಿ ಕೊಂಡಿರುವುದು ಎಡರಂಗದ ರಾಜ್ಯ ನೇತೃತ್ವದ ತೀರ್ಮಾನ ಪ್ರಕಾರವೆಂದು ತಿಳಿಸಿದ್ದಾರೆ. ಹುದ್ದೆಯನ್ನು ತೆರವುಗೊಳಿಸಬೇಕಿದ್ದರೆ ಎಡರಂಗದ ರಾಜ್ಯ ನಾಯಕತ್ವವೇ ತನಗೆ ನಿರ್ದೇಶ ನೀಡಬೇಕೆಂದು ಅವರು ನಿಲುವು ಸ್ವೀಕರಿಸಿದರು. ಇದನ್ನು ಪ್ರತಿಭಟಿಸಿ ಸಿಪಿಐಯ ಡೆಪ್ಯುಟಿ ಮೇಯರ್ ಮಧು ಹಾಗೂ ಇಬ್ಬರು ಸ್ಥಾಯಿ ಸಮಿತಿ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ.