ಕೋಟೆಕಾರು ಸಹಕಾರ ಸಂಘದಿಂದ 12 ಕೋಟಿ ರೂ. ಮೌಲ್ಯದ ನಗ ದರೋಡೆ: ಕಾಸರಗೋಡಿನಲ್ಲಿ ವ್ಯಾಪಕ ತನಿಖೆ
ಕಾಸರಗೋಡು: ಉಳ್ಳಾಲ ಬಳಿಯ ಕೋಟೆಕಾರು ಸಹಕಾರ ಸಂಘದಲ್ಲಿ ನಿನ್ನೆ ದರೋಡೆ ನಡೆಸಿದ ತಂಡ ಬಳಸಿದ ಪಿಯೆಟ್ ಕಾರು ದರೋಡೆ ಬಳಿಕ ತಲಪ್ಪಾಡಿ ತನಕ ಸಾಗಿರುವ ದೃಶ್ಯಗಳು ಆ ಪರಿಸರದ ಸಿಸಿಟಿವಿಯಲ್ಲಿ ಪತ್ತೆಯಾಗಿದ್ದು, ಅದರಿಂದಾಗಿ ಆ ಕಾರು ಕಾಸರ ಗೋಡು ಪ್ರವೇಶಿಸಿರಬಹುದೆಂಬ ಶಂಕೆ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ಕಾಸರಗೋಡು ಪೊಲೀಸರೂ ಇನ್ನೊಂದೆಡೆ ಈ ಬಗ್ಗೆ ಸಮಾನಾಂತರ ತನಿಖೆ ಆರಂಭಿಸಿದ್ದಾರೆ. ಇದರಂತೆ ತಲಪ್ಪಾಡಿಯಿಂದ ಆರಂಭಗೊಂಡು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲಾ ಪ್ರಧಾನ ರಸ್ತೆಗಳಲ್ಲಿ ಪೊಲೀಸರು ನಿನ್ನೆ ವ್ಯಾಪಕ ಪರಿಶೀಲನೆ ನಡೆಸಿದ್ದಾರ. ಆ ಮೂಲಕ ಈ ಪ್ರಕರಣದಲ್ಲಿ ಕರ್ನಾಟಕ ಪೊಲೀಸರಿಗೂ ಸಾಥ್ ನೀಡಿದ್ದಾರೆ.
ದರೋಡೆ ನಡೆಸಿದ ತಂಡದಲ್ಲಿ ಆರು ಮಂದಿ ಒಳಗೊಂಡಿರುವ ಪ್ರಾಥಮಿಕ ಮಾಹಿತಿ ಪೊಲೀಸರಿಗೆ ಲಭಿಸಿದೆ. ದರೋಡೆ ಬಳಿಕ ಆ ತಂಡ ಹಳೆ ಪಿಯೆಟ್ ಕಾರಿನಲ್ಲಿ ನಿನ್ನೆ ಮಧ್ಯಾಹ್ನ ಸುಮಾರು ಒಂದೂವರೆ ಗಂಟೆ ವೇಳೆಗೆ ತಲಪ್ಪಾಡಿ ತಪಾಸಣಾ ಕೇಂದ್ರ ದಾಟಿದ ದೃಶ್ಯ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ವ್ಯಾಪಕ ಶೋಧ ನಡೆಸಿದರೂ ಕಾರನ್ನು ಪತ್ತೆಹಚ್ಚಲು ಈತನಕ ಸಾಧ್ಯವಾಗಿಲ್ಲ. ಕಾರು ಕಾಸರಗೋಡಿಗೆ ಬರುವ ಸಾಧ್ಯತೆ ಯನ್ನು ಪರಿಗಣಿಸಿ ನಿನ್ನೆ ಮಧ್ಯಾಹ್ನ ಕಾಸರಗೋಡು ಪೊಲೀಸರು ವ್ಯಾಪಕ ಪರಿಶೀಲನೆ ನಡೆಸಿದರು. ಕಾರು ಹೊಸಂಗಡಿ-ಮೀಯಪದವು-ಆನೆಕಲ್ಲಿನ ಮೂಲಕ ಮತ್ತೆ ಕರ್ನಾಟಕಕ್ಕೆ ಪ್ರವೇಶಿಸಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂ ತಿಲ್ಲವೆಂದು ಪೊಲೀಸರು ಹೇಳಿದ್ದಾರೆ.
ಉಳ್ಳಾಲ ಸಮೀಪದ ತಲಪ್ಪಾಡಿ ಕೆಸಿ ರೋಡ್‌ನಲ್ಲಿರುವ ಕೋಟೆಕ್ಕಾರು ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ನಿನ್ನೆ ಮಧ್ಯಾಹ್ನ ಹಾಡಹಗಲೇ ಈ ದರೋಡೆ ನಡೆದಿದೆ. 12 ಕೋಟಿ ರೂ. ಮೌಲ್ಯದ ನಗ-ನಗದನ್ನು ದರೋಡೆಕೋರರು ದೋಚಿದ್ದಾರೆ. ಹಳೆ ಪಿಯೆಟ್ ಕಾರಿನಲ್ಲಿ ನಿನ್ನೆ ಮಧ್ಯಾಹ್ನ ಬಂದ ದರೋಡೆಕೋರರು ಸಂಘದ ಸಿಬ್ಬಂದಿಗಳಿಗೆ ಪಿಸ್ತೂಲ್ ಮತ್ತು ತಲವಾರು ತೋರಿಸಿ ಬೆದರಿಸಿ ಅವರಿಂದ ಕೀಲಿ ಗೊಂಜಲನ್ನು ಪಡೆದು ಲಾಕರ್ ತೆರೆದು ಅದರೊಳಗಿದ್ದ ನಗ-ನಗದುಗಳನ್ನೆಲ್ಲಾ ದೋಚಿ ಬಂದ ಕಾರಿನಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ. ಇವರು ಬಳಸಿದ ಕಾರಿನ ನಂಬ್ರ ನಕಲಿಯಾಗಿರ ಬಹುದೆಂಬ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ದರೋಡೆಕೋರರು ಪ್ರೊಫೆಶನಲ್ ತಂಡ ಆಗಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ವಿಶೇಷವೇನೆಂದರೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಮಂಗಳೂರಿಗೆ ಆಗಮಿಸಿ ಹಿರಿಯ ಪೊಲೀಸ್ ಅಧಿಕಾರಿಗಳೊಂ ದಿಗೆ ಚರ್ಚೆ ನಡೆಸುತ್ತಿರುವ ವೇಳೆಯಲ್ಲೇ ಇಡೀ ಊರನ್ನೇ ನಡುಗಿಸಿದ ಈ ದರೋಡೆ ನಡೆದಿದೆ. ದರೋಡೆಕೋರರ ಪತ್ತೆಗಾಗಿ ಕರ್ನಾಟಕ ಪೊಲೀಸರು ವಿಶೇಷ ತಂಡಕ್ಕೆ ರೂಪು ನೀಡಿದ್ದಾರೆ.