ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಾಹನಗಳು ಕುಂಬಳೆ ಠಾಣೆ ಪರಿಸರದಲ್ಲಿ ತುಕ್ಕು ಹಿಡಿದು ನಾಶದತ್ತ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ಸಮೀಪ ಹಾಗೂ ಶಾಲಾ ಮೈದಾನ ಸುತ್ತ ವಾಹನಗಳು ರಾಶಿ ಬಿದ್ದು ತುಕ್ಕು ಹಿಡಿದು ನಾಶದ ಹಂತಕ್ಕೆ ತಲುಪಿವೆ. ಕುಂಬಳೆ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ವಶಪಡಿಸಿಕೊಂಡ ವಾಹನಗಳು ಇದಾಗಿವೆ. ಪೊಲೀಸ್ ಠಾಣೆ ಆವರಣದೊಳಗೆ ಸೌಕರ್ಯ ವಿಲ್ಲದುದರಿಂದ ಶಾಲಾ ಮೈದಾನ ಸಮೀಪ ವಾಹನಗಳನ್ನು ನಿಲ್ಲಿಸಲಾಗಿದೆ. ಗುಜರಿ ವ್ಯಾಪಾರಿಗಳೂ ಖರೀದಿಸಲು ಹಿಂಜರಿಯುವ ರೀತಿಯಲ್ಲಿ ಈ ವಾಹನಗಳು ತುಕ್ಕು ಹಿಡಿದಿವೆ. ಈ ಹಿಂದೆ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ವಾಹನಗಳನ್ನು ಇಲ್ಲಿಂದ ತೆರವುಗೊಳಿಸಲು ಹರಾಜು ಕ್ರಮ ಕೈಗೊಂಡಿದ್ದರು. ಕೆಲವೇ ವಾಹನಗಳು ಹರಾಜಿನಲ್ಲಿ ಮಾರಾಟವಾಗಿದ್ದವು. ಇದರಿಂದ ಸರಕಾರಕ್ಕೆ ಭಾರೀ ಮೊತ್ತ ಲಭಿಸಿತ್ತು. ಆದರೆ ಉಳಿದ ವಾಹನಗಳ ಹರಾಜಿಗೆ ಕ್ರಮ ಉಂಟಾಗಿಲ್ಲ. ಇದರಿಂದ ಇದೀಗ ಠಾಣೆ ಹಾಗೂ ಪರಿಸರ ಪ್ರದೇಶಗಳಲ್ಲಿ ವಾಹನಗಳು ರಾಶಿ ಬಿದ್ದಿವೆ.

ಕುಂಬಳೆಯಲ್ಲಿ ಇದೀಗ ನಾಶಗೊಳ್ಳುತ್ತಿರುವ ವಾಹನಗಳಲ್ಲಿ ಹೆಚ್ಚಿನವು ಅನಧಿಕೃತವಾಗಿ ಹೊಯ್ಗೆ ಸಾಗಾಟ ವೇಳೆ ವಶಪಡಿಸಿಕೊಂಡ ಟಿಪ್ಪರ್ ಲಾರಿಗಳು ಹಾಗೂ ಟೆಂಪೋ ಗಳಾಗಿವೆ. ಮಾದಕವಸ್ತುಗಳ ಸಾಗಾಟ ನಡೆಸಿದ ಹಲವು ಕಾರುಗಳೂ ಇವೆ. ಅಲ್ಲದೆ ಅಪಘಾತಕ್ಕೀಡಾದ ವಾಹನಗಳೂ ಇಲ್ಲಿದ್ದು, ಇವೆಲ್ಲಾ ತುಕ್ಕುಹಿಡಿದು ನಾಶಗೊಳ್ಳುತ್ತಿವೆ. ಇದೇ ವೇಳೆ ವಾಹನಗಳ ಮಧ್ಯೆ ವಿಷ ಜಂತು ಗಳು ಕೂಡಾ ಸೇರಿಕೊಂಡಿದ್ದು, ಇದು ಶಾಲಾ ವಿದ್ಯಾರ್ಥಿಗಳ ಸಹಿತ ಪಾದ ಚಾರಿಗಳಿಗೆ ಆತಂಕಕ್ಕೂ ಕಾರಣವಾಗಿದೆ. ಈ ಹಿಂದೆ ಇಲ್ಲಿದ್ದ ಪಿಡಬ್ಲ್ಯುಡಿಯ ಹಳೆಯ ಕಟ್ಟಡದ ಅವಶಿಷ್ಟಗಳನ್ನೂ ಇಲ್ಲಿ ರಾಶಿ ಹಾಕಲಾಗಿದೆ.

ಪಿಡಬ್ಲ್ಯುಡಿ ಸ್ಥಳವನ್ನು ಪೊಲೀಸ್ ಠಾಣೆಗೆ ನೀಡಿ ಠಾಣೆಯನ್ನು ಹೊಸತಾಗಿ ನಿರ್ಮಿಸಿ ಮೂಲಭೂತ ಸೌಕರ್ಯ ಹೆಚ್ಚಿಸಬೇಕೆಂದು ನಾಗರಿಕರು ಆಗ್ರಹಪಟ್ಟಿ ದ್ದಾರೆ. ಹಾಗಾದರೆ ಮಾತ್ರ ವಾಹನಗಳ ನಿಲುಗಡೆಗೆ ಸೌಕರ್ಯ ಉಂಟಾಗಲಿದೆ. ಅದಕ್ಕಾಗಿ ಜನಪ್ರತಿನಿಧಿಗಳು ಪ್ರಯತ್ನ ನಡೆಸಬೇಕೆಂದೂ ಅಭಿಪ್ರಾಯ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

You cannot copy content of this page