ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಿಂದ ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಕಳವು: ಸಿ.ಸಿ ಕ್ಯಾಮರಾದಲ್ಲಿ ಓರ್ವ ಕಳ್ಳನ ದೃಶ್ಯ ಪತ್ತೆ
ಉಪ್ಪಳ: ಮೀಂಜ ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನಕ್ಕೆ ನಿನ್ನೆ ರಾತ್ರಿ ಕಳ್ಳರು ನುಗ್ಗಿ ಚಿನ್ನಾಭರಣ ಹಾಗೂ ಬೆಳ್ಳಿಯ ಸಾಮಗ್ರಿಗಳನ್ನು ದೋಚಿದ ಘಟನೆ ನಡೆದಿದೆ.
ಗರ್ಭಗುಡಿಯ ಬಾಗಿಲಿನ ಬೀಗ ಮುರಿಯಲಾಗಿದ್ದು, ಅದರೊಳಗಿದ್ದ ಬೆಳ್ಳಿಯ ಸಾಮಗ್ರಿಗಳನ್ನು ಕಳವು ನಡೆಸಲಾಗಿದೆ. ಕ್ಷೇತ್ರ ಕಚೇರಿಯ ಲಾಕರ್ ಮುರಿಯಲೆತ್ನಿಸಿದ್ದು ಆದರೆ ಅದು ಸಾಧ್ಯವಾಗಲಿಲ್ಲ.
ಇದೇ ವೇಳ ಭಕ್ತರು ಹರಕೆ ರೂಪದಲ್ಲಿ ನೀಡಿದ್ದ ಸುಮಾರು 10 ಪವನ್ ಚಿನ್ನಾಭರಣಗಳನ್ನು ಸಣ್ಣ ಪೆಟ್ಟಿಗೆಯೊಂದರಲ್ಲಿ ಲಾಕರ್‌ನ ಮೇಲೆ ಇರಿಸಲಾಗಿತ್ತು. ಅದನ್ನು ಕಳ್ಳರು ದೋಚಿದ್ದಾರೆ. ನಿನ್ನೆ ರಾತ್ರಿ ಪೂಜೆಯ ಬಳಿಕ ಕ್ಷೇತ್ರಕ್ಕೆ ಬಾಗಿಲುಮುಚ್ಚಲಾಗಿತ್ತು. ಇಂದು ಬೆಳಿಗ್ಗೆ ಸಿಬ್ಬಂದಿಗಳು ತಲುಪಿ ಸುತ್ತುಗೋಪುರದ ಬಾಗಿಲು ತೆರೆದು ಒಳಗೆ ಪ್ರವೇಶಿಸಿದಾಗ ಕಳವು ನಡೆದಿರುವುದು ತಿಳಿದುಬಂದಿದೆ. ಸುತ್ತುಗೋಪುರದ ಬಾಗಿಲನ್ನು ಕಳ್ಳರು ತೆರೆಯಲಿಲ್ಲ. ಬದಲಾಗಿ ಸುತ್ತು ಗೋಪುರದ ಛಾವಣಿಗೆ ಹತ್ತಿ ಕಳ್ಳರು ಒಳಗಿಳಿದು ಕಳವು ನಡೆಸಿ ಪರಾರಿಯಾ ಗಿರಬಹುದೆಂದು ಅಂದಾಜಿಸಲಾಗಿದೆ.
ವಿಷಯ ತಿಳಿದು ಮಂಜೇಶ್ವರ ಪೊಲೀಸರು ತಕ್ಷಣ ತಲುಪಿ ತನಿಖೆಗೆ ಚಾಲನೆ ನೀಡಿದ್ದಾರೆ. ಕ್ಷೇತ್ರದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಅದರಲ್ಲಿ ನಿನ್ನೆ ರಾತ್ರಿ 11.30ರ ವೇಳ ಕೋಟು ಹಾಗೂ ಕೈಗಳಿಗೆ ಗ್ಲೌಸ್ ಧರಿಸಿದ ವ್ಯಕ್ತಿಯೋರ್ವ ಕಳವು ನಡೆಸುವ ದೃಶ್ಯ ಕಂಡುಬಂದಿದೆ. ಈ ದೃಶ್ಯವನ್ನು ಪೊಲೀಸರು ಸಂಗ್ರಹಿಸಿಕೊಂಡು ಅದರ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.
ನಿನ್ನೆ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಇದೇ ಸಂದರ್ಭದಲ್ಲಿ ಕಳ್ಳರು ಕ್ಷೇತ್ರಕ್ಕೆ ನುಗ್ಗಿರಬಹುದೆಂದು ಅಂದಾ ಜಿಸಲಾಗಿದೆ. ಕಳ್ಳರು ವಾಹನದಲ್ಲಿ ತಲು ಪಿರುವುದಾಗಿ ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಪರಿಸರದ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಲಿರುವ ಕ್ರಮ ಆರಂಭಿಸಲಾಗಿದೆ. ಕ್ಷೇತ್ರದಿಂದ ಕಳವು ನಡೆದ ವಿಷಯ ತಿಳಿದೊಡನೆ ಭಾರೀ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ತಲುಪಿದ್ದಾರೆ.