ಕ್ಷೇತ್ರಗಳಲ್ಲಿ ಸಿಡಿಮದ್ದು ಪ್ರದರ್ಶನಕ್ಕೆ ಕೇಂದ್ರ ಹೇರಿದ ನಿಯಂತ್ರಣ ಹಿಂತೆಗೆದುಕೊಳ್ಳಬೇಕು- ಕೇರಳ

ತಿರುವನಂತಪುರ: ಕ್ಷೇತ್ರಗಳಲ್ಲಿ  ಉತ್ಸವ ವೇಳೆ  ಸಿಡಿಮದ್ದು ಪ್ರದರ್ಶನವನ್ನು ನಿಯಂತ್ರಿಸಿ ಕೇಂದ್ರ ಸರಕಾರ ಹೊರಡಿಸಿದ ಹೊಸ ಆದೇಶವನ್ನು ಹಿಂತೆಗೆದುಕೊಳ್ಳ ಬೇಕೆಂದು ರಾಜ್ಯ ಮುಜರಾಯಿ ಖಾತೆ ಸಚಿವ ವಿ.ಎನ್. ವಾಸವನ್ ಆಗ್ರಹಪಟ್ಟಿದ್ದಾರೆ. ಈ  ಬೇಡಿಕೆಯನ್ನು ಮುಂದಿರಿಸಿ ಅವರು ಪತ್ರ ಬರೆದಿದ್ದಾರೆ. ಕೇಂದ್ರ ಸರಕಾರ ಹೊರಡಿಸಿದ ಹೊಸ ಆದೇಶ ಜ್ಯಾರಿಗೊಂಡಲ್ಲಿ ತೃಶೂರ್ ಪೂರಂ ಸೇರಿದಂತೆ ರಾಜ್ಯದ ಕ್ಷೇತ್ರಗಳಲ್ಲಿ  ಸಿಡಿಮದ್ದು ಪ್ರದರ್ಶನ ನಡೆಸಲು ಸಾಧ್ಯವಾಗದ ಸ್ಥಿತಿ ಉಂಟಾಗಲಿದೆ ಎಂದು ಪತ್ರದಲ್ಲಿ ಸಚಿವರು ಕೇಂದ್ರದ ಗಮನಕ್ಕೆ ತಂದಿದ್ದಾರೆ.

ಪುಟ್ಟಿಂಗಲ್‌ನಲ್ಲಿ  ಸಿಡಿಮದ್ದು ಪ್ರದರ್ಶನ ವೇಳೆ ನಡೆದ ಅಪಘಾತದ ಹಿನ್ನೆಲೆ ಬಗ್ಗೆ ತನಿಖೆ ನಡೆಸಿದ ಸಮಿತಿಯು ಸಲ್ಲಿಸಿದ ಶಿಫಾರಸ್ಸಿನಂತೆ ಕೇಂದ್ರ ಸರಕಾರ ಸಿಡಿಮದ್ದು ಪ್ರದರ್ಶನ ಮೇಲೆ ನಿಯಂತ್ರಣ ಹೇರಿ ಹೊಸ  ಆದೇಶ ಜ್ಯಾರಿಗೊಳಿಸಿದೆ.  ಇದರ ವಿರುದ್ಧ ಕೇರಳದ ಹಲವು ಕ್ಷೇತ್ರ ಸಂಘಟನೆಗಳೂ ರಂಗಕ್ಕಿಳಿದಿವೆ. ಮಾತ್ರವಲ್ಲ ಕೇಂದ್ರ ಹೇರಿರುವ ಈ ನಿಯಂತ್ರಣವನ್ನು ಹಿಂಪಡೆಯುವಂತೆ ಮಾಡಲು ನಾನು ಮಧ್ಯ ಪ್ರವೇಶಿಸುವುದಾಗಿ ಸಚಿವ ಸುರೇಶ್ ಗೋಪಿ ಕೂಡಾ ಭರವಸೆ ನೀಡಿದ್ದಾರೆ.  ಕೇಂದ್ರ ಸರಕಾರ ಹೊರಡಿಸಿದ ಆದೇಶದಲ್ಲಿ ಕ್ಷೇತ್ರಗಳಲ್ಲಿ ಸಿಡಿಮದ್ದು ಪ್ರದರ್ಶನಕ್ಕೆ ಸಂಬಂಧಿಸಿ ೩೫ ನಿಯಂತ್ರಣಗಳನ್ನು ಹೇರಲಾಗಿದೆ. ಈ ನಿಯಂತ್ರಣ ಜ್ಯಾರಿಗೊಂಡಲ್ಲಿ ಅದು ಕ್ಷೇತ್ರದಲ್ಲಿ ಉತ್ಸವದಂಗವಾಗಿ ನಡೆಯುವ ಸಿಡಿಮದ್ದು ಪ್ರದರ್ಶನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಮಾತ್ರವಲ್ಲ ಅದು ಆಚಾರ ಉಲ್ಲಂಘನೆಯೂ ಆಗಲಿದೆಯೆಂದು ಹಲವು ಕ್ಷೇತ್ರ ಸಮಿತಿಗಳೂ ಹೇಳಿದ್ದು, ಆ ಹಿನ್ನೆಲೆಯಲ್ಲಿ ನಿಯಂತ್ರಣವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದೂ  ಅವುಗಳು ಆಗ್ರಹಪಟ್ಟಿವೆ.

Leave a Reply

Your email address will not be published. Required fields are marked *

You cannot copy content of this page