ಗದ್ದೆಯಿಂದ ಅಗೆದು ತೆಗೆದ ಆಲೂಗಡ್ಡೆಯಲ್ಲಿ ವಿಷ್ಣುವಿನ ಅವತಾರ ರೂಪ: ಕಲ್ಕಿ ಅವತಾರಕ್ಕೆ ಸಿದ್ಧತೆ ಎಂದು ಭಕ್ತರು
ಬರೇಲಿ: ಗದ್ದೆಯಲ್ಲಿ ಆಲೂಗಡ್ಡೆ ಕೃಷಿ ಕೈಗೊಂಡು ಅದನ್ನು ಕೊಯ್ಲು ನಡೆಸುವಾಗ ದೇವರ ರೂಪದಲ್ಲಿ ಕಂಡು ಬಂದಿರುವುದು ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಈ ಆಲೂಗಡ್ಡೆಗಳನ್ನು ಸಾಂಬಾಲ್‌ನ ತುಳಸಿಮಾನಸ್ ದೇವಸ್ಥಾನದಲ್ಲಿ ಇರಿಸಲಾಗಿದೆ. ಹಲವಾರು ಮಂದಿ ಭಕ್ತರು ಇದನ್ನು ನೋಡಲು ಕ್ಷೇತ್ರಕ್ಕೆ ತಲುಪುತ್ತಿದ್ದಾರೆ. ಉತ್ತರ ಪ್ರದೇಶದ ಬರೇಲಿಯ ಕೈಮ ಗ್ರಾಮದಲ್ಲಿ ಈ ವಿಶಿಷ್ಟ ಆಲೂಗಡ್ಡೆ ಕಂಡು ಬಂದಿದೆ. ವಿಷ್ಣುವಿನ ಅವತಾರಗಳಾದ ಕೂರ್ಮ, ಮತ್ಸ್ಯ, ವರಾಹ ಎಂಬಿವುಗಳ ಹಾಗೂ ಹಾವಿನ ರೂಪು ಆಲೂಗಡ್ಡೆಯಲ್ಲಿ ಪ್ರತ್ಯಕ್ಷಗೊಂಡಿದೆ ಎಂದು ಭಕ್ತರು ನುಡಿಯುತ್ತಾರೆ.
ಕೃಷಿಕನಾದ ರಾಮ್‌ಪ್ರಕಾಶ್ ಇತ್ತೀಚೆಗೆ ಆಲೂಗಡ್ಡೆ ಕೊಯ್ಲು ನಡೆಸುತ್ತಿದ್ದ ಮಧ್ಯೆ ಸಾಮಾನ್ಯಕ್ಕಿಂತ ಹೆಚ್ಚು ದೊಡ್ಡದಾದ ಆಲೂಗಡ್ಡೆ ಲಭಿಸಿದೆ. ಇದನ್ನು ಕ್ಷೇತ್ರಕ್ಕೆ ಕೊಂಡುಹೋಗಿದ್ದಾರೆ. ಕ್ಷೇತ್ರದ ಪುರೋಹಿತ ಶಂಕರ್‌ಲಾಲ್ ಪರಿಶೀಲಿಸಿದ ಬಳಿಕ ಆಲೂಗಡ್ಡೆಯನ್ನು ವಿಗ್ರಹದ ಸಮೀಪ ಇರಿಸಿದರು. ಆಲೂಗಡ್ಡೆಗೆ ವಿಷ್ಣುವಿನ ಅವತಾರಗಳ ಸ್ಪಷ್ಟವಾದ ರೂಪು ಇದೆ ಎಂದು ಪುರೋಹಿತರು ತಿಳಿಸಿದ್ದರು. ಭಗವಾನ್ ಕಲ್ಕಿ ಸಾಂಬಾಲ್‌ನಲ್ಲಿ ಅವತಾರವೆತ್ತಲು ನಡೆಯುತ್ತಿರುವ ಸಿದ್ಧತೆ ಇದೆಂದು ಹೇಳಲಾಗುತ್ತಿದೆ.ಈ ಸುದ್ದಿ ಪ್ರಚಾರಗೊಂಡ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಭಕ್ತರು ಹರಿದುಬರುತ್ತಿದ್ದಾರೆ.