ಗರ್ಭಿಣಿ ಹೆರಿಗೆ ವೇಳೆ ಮೃತ್ಯು: ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಸಂಬಂಧಿಕರ ದೂರು
ಕಲ್ಲಿಕೋಟೆ: ಗರ್ಭಸ್ಥ ಶಿಶು ಹಾಗೂ ಗರ್ಭಿಣಿ ಮೃತಪಟ್ಟ ಘಟನೆಯಲ್ಲಿ ಸಂಬಂಧಿಕರು ವೈದ್ಯರ ವಿರುದ್ಧ ಆರೋಪ ಹೊರಿಸಿದ್ದಾರೆ. ಎಕರೂಲ್ ಉಣ್ಣಿಕುಳಂ ನಿವಾಸಿ ಆರ್ಪಟ್ಟ ವಿವೇಕ್ರ ಪತ್ನಿ ಗರ್ಭಿಣಿ ಅಶ್ವತಿ (೩೫), ಶಿಶು ಮೃತಪಟ್ಟವರು. ನಿನ್ನೆ ಮುಂಜಾನೆ ಹೊಟ್ಟೆಯಲ್ಲಿ ಮಗು ಮೃತಪಟ್ಟಿದೆ. ಗಂಭೀರವಾದ ಹಿನ್ನೆಲೆಯಲ್ಲಿ ಅಶ್ವತಿಯನ್ನು ಕಲ್ಲಿಕೋಟೆ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿದ್ದರೂ, ಸಂಜೆ ವೇಳೆಗೆ ಆಕೆಯೂ ಮೃತಪಟ್ಟಿದ್ದಾರೆ. ಹೆರಿಗೆಗಾಗಿ ಉಳ್ಯೋರಿನಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಅಶ್ವತಿಯವರನ್ನು ದಾಖಲಿಸಲಾಗಿತ್ತು. ಹೆರಿಗೆ ನೋವು ಉಂಟಾಗದ ಹಿನ್ನೆಲೆಯಲ್ಲಿ ಮಂಗಳವಾರ, ಬುಧವಾರ ಔಷಧಿ ನೀಡಿದ್ದರು. ಬುಧವಾರ ಮಧ್ಯಾಹ್ನದ ವೇಳೆಗೆ ನೋವು ಕಂಡು ಬಂದರೂ ಹೆರಿಗೆ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಿಸೇರಿಯನ್ ನಡೆಸಬೇಕೆಂದು ಅಶ್ವತಿ ಹಾಗೂ ಸಂಬಂಧಿಕರು ಆಗ್ರಹಿಸಿದರೂ, ಅದರ ಅಗತ್ಯವಿಲ್ಲ, ಸಾಮಾನ್ಯ ರೀತಿಯಲ್ಲಿ ಹೆರಿಗೆ ನಡೆಯಬಹುದೆಂದು ವೈದ್ಯರು ತಿಳಿಸಿದ್ದರೆನ್ನಲಾಗಿದೆ. ಆದರೆ ಬಳಿಕ ಹೊಟ್ಟೆಯಲ್ಲಿ ಮಗು ಮೃತಪಟ್ಟಿದೆ. ಈ ವೇಳೆ ಗರ್ಭಪಾತ್ರವನ್ನು ತೆರವುಗೊಳಿಸಬೇಕು, ಇಲ್ಲದಿದ್ದರೆ ಯುವತಿಯ ಜೀವಕ್ಕೂ ಅಪಾಯ ವೆಂದು ಆಸ್ಪತ್ರೆಯಿಂದ ತಿಳಿಸಿದ ಹಿನ್ನೆಲೆಯಲ್ಲಿ ಆಕೆಯ ಗರ್ಭಪಾತ್ರವನ್ನು ತೆರವುಗೊಳಿಸಲಾಗಿತ್ತು. ಬಳಿಕ ಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ವೆಂಟಿಲೇಟರ್ ನಲ್ಲಿರಿಸಲಾಗಿದ್ದು, ಅಲ್ಲಿಂದ ತಜ್ಞಚಿಕಿತ್ಸೆಗಾಗಿ ಕಲ್ಲಿಕೋಟೆಯ ಮತ್ತೊಂದು ಆಸ್ಪತ್ರೆಗೆ ಕೊಂಡುಹೋಗಲಾಗಿತ್ತು. ಅಲ್ಲಿ ನಿನ್ನೆ ಸಂಜೆ ಈಕೆಯ ಸಾವು ಸಂಭವಿಸಿದೆ. ಆಸ್ಪತ್ರೆ ಅಧಿಕಾರಿಗಳ ಅನಾಸ್ಥೆ ಸಾವಿಗೆ ಕಾರಣವೆಂದು ಸಂಬಂಧಿಕರು ದೂರು ನೀಡಿದ್ದು, ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.