ಗಲ್ಫ್‌ನಿಂದ ಕಳುಹಿಸಿಕೊಟ್ಟ ಚಿನ್ನ ಸಹಿತ ನಾಪತ್ತೆಯಾದ ಯುವಕ ಪೊಲೀಸ್ ಠಾಣೆಯಲ್ಲಿ ಶರಣು
ಬದಿಯಡ್ಕ: ಗಲ್ಫ್‌ನಿಂದ ಕಳುಹಿಸಿ ಕೊಟ್ಟ ಚಿನ್ನ ಸಹಿತ ನಾಟಕೀಯ ರೀತಿಯಲ್ಲಿ ನಾಪತ್ತೆಯಾಗಿದ್ದ ಯುವಕ ಮರಳಿ ಬಂದಿದ್ದಾನೆ. ಮುನಿಯೂರು ನಿವಾಸಿಯಾದ ೨೮ರ ಹರೆಯದ ಯುವಕ ನಿನ್ನೆ ಬೆಳಿಗ್ಗೆ ಬದಿಯಡ್ಕ ಪೊಲೀಸ್ ಠಾಣೆಗೆ ತಲುಪಿ ಶರಣಾಗಿದ್ದಾನೆ.
ಡಿವೈಎಸ್ಪಿ ಪಿ.ಕೆ. ಸುಧಾಕರನ್ ಸಹಿತ ಹಿರಿಯ ಪೊಲೀಸ್ ಅಧಿ ಕಾರಿಗಳು ತನಿಖೆಗೊಳಪಡಿಸಿದ ಬಳಿಕ ಯುವಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕಳೆದ ತಿಂಗಳ ೨೫ರಂದು ಯುವಕ ನಾಪತ್ತೆಯಾಗಿದ್ದನು. ಶಾರ್ಜಾದಿಂದ ಬಂದು ಕಲ್ಲಿಕೋಟೆ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಯುವಕ ಮನೆಗೆ ಫೋನ್ ಕರೆ ಮಾಡಿ ಊರಿಗೆ ಬರುವ ವಿಷಯ ತಿಳಿಸಿದ್ದನು. ಅದರ ಅನಂತರ ಯುವಕನ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ. ಆತನ ಫೋನ್‌ಗೆ ಕರೆ ಮಾಡಲು ಪ್ರಯತ್ನಿಸಿದರೂ ಅದು ಸ್ವಿಚ್ ಆಫ್ ಆಗಿರುವುದಾಗಿ ತಿಳಿದುಬಂದಿದೆ. ತನ್ನ ಕೈಯಲ್ಲಿ ಚಿನ್ನ ಇದೆಯೆಂದು ಈ ಹಿಂದೆ ಫೋನ್ ಕರೆ ಮಾಡಿದಾಗ ಯುವಕ ತಿಳಿಸಿದ್ದನೆಂದು ಹೇಳಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿಳಿದು ಒಂದು ದಿನ ಕಳೆದರೂ ಯಾವುದೇ ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ ಆತಂಕಗೊಂಡ ಮನೆಯವರು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೇಸು ದಾಖಲಿಸಿ ಕಲ್ಲಿಕೋಟೆ ಸಹಿತ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿದ್ದರಾದರೂ ಯುವಕನ ಕುರಿತು ಯಾವುದೇ ಸುಳಿವು ಲಭಿಸಿಲ್ಲ. ಈ ಮಧ್ಯೆ ಗಲ್ಫ್ ನಿಂದ ಕಳುಹಿ ಸಿಕೊಟ್ಟ ಚಿನ್ನ ಸಹಿತ ಯುವಕನನ್ನು ಅಪಹರಿಸಲಾಗಿದೆಯೆಂಬ ಸುದ್ದಿಯೂ ಕೇಳಿಬಂದಿತ್ತು. ಚಿನ್ನದ ಹಕ್ಕುದಾರರೆಂದು ಹೇಳುವ ವ್ಯಕ್ತಿಗಳು ಯುವಕನ ಮನೆಗೆ ತಲುಪಿ ಬೆದರಿಕೆಯೊಡ್ಡಿದ ಘಟನೆಯೂ ನಡೆದಿತ್ತು. ಇದರಿಂದ ಯುವಕನ ನಾಪತ್ತೆಗೆ ಸಂಬಂಧಿಸಿ ಆತಂಕ ತೀವ್ರಗೊಂಡಿತು. ಇದೇ ಸಂದರ್ಭದಲ್ಲಿ ಯುವಕ ನಿನ್ನೆ ಪೊಲೀಸ್ ಠಾಣೆಗೆ ತಲುಪಿ ಶರಣಾಗಿದ್ದಾನೆ. ಚಿನ್ನವನ್ನು ಮಾರಾಟಗೈದ ಬಗ್ಗೆ ಈತ ಪೊಲೀಸರಿಗೆ ತಿಳಿಸಿರುವುದಾಗಿಯೂ, ಬೆಳ್ಳಿಪ್ಪಾಡಿ ನಿವಾಸಿಯಾದ ಓರ್ವನ ಕುರಿತು ಸೂಚನೆ ನೀಡಿರುವುದಾಗಿಯೂ ಪೊಲೀಸ್ ಮೂಲಗಳು ತಿಳಿಸಿವೆ.