ಗಲ್ಫ್‌ನಿಂದ ಯುವಕನನ್ನು ಊರಿಗೆ ಕರೆಸಿ ಅಪಹರಿಸಿ ಕೊಲೆಗೈದ ಪ್ರಕರಣ: ತನಿಖೆ ಕ್ರೈಂಬ್ರಾಂಚ್‌ಗೆ ಹಸ್ತಾಂತರ
ಕಾಸರಗೋಡು: ಗಲ್ಫ್‌ನಲ್ಲಿದ್ದ ಯುವಕನನ್ನು ಊರಿಗೆ ಕರೆಸಿದ ಬಳಿಕ ಆತನನ್ನು ತಂಡವೊಂದು ಅಪಹರಿಸಿ ಪೈಶಾಚಿಕ ರೀತಿಯಲ್ಲಿ ಹಲ್ಲೆಗೈದ ಬಳಿಕ ಕೊಲೆ ನಡೆಸಿದ ಪ್ರಕರಣದ ತನಿಖೆಯನ್ನು ಜಿಲ್ಲಾ ಕ್ರೈಂಬ್ರಾಂಚ್‌ಗೆ ಬಿಟ್ಟು ಕೊಡಲಾಗಿದೆ.
ಪುತ್ತಿಗೆ ಮುಗು ರೋಡ್ ನಸೀಮ ಮಂಜಿಲ್‌ನ ದಿ| ಅಬ್ದುಲ್ ರಹ್ಮಾನ್ ಎಂಬವರ ಪುತ್ರ ಅಬೂಬಕರ್ ಸಿದ್ದಿಕ್ (31)ರ ಕೊಲೆ ಪ್ರಕರಣವನ್ನು ಇನ್ನು ಜಿಲ್ಲಾ ಕ್ರೈಂಬ್ರಾಂಚ್ ತನಿಖೆ ನಡೆಸಲಿದೆ. ಈ ಬಗ್ಗೆ ರಾಜ್ಯ ಗೃಹ ಇಲಾಖೆ ಆದೇಶ ಹೊರಡಿಸಿದೆ. 2022 ಜೂನ್ 26 ರಂದು ಅಬೂಬಕರ್ ಸಿದ್ದಿಕ್‌ರ ಕೊಲೆ ನಡೆದಿತ್ತು. ಗಲ್ಫ್ ಉದ್ಯೋಗಿಯಾಗಿದ್ದ ಅಬೂಬಕರ್ ಸಿದ್ದಿಕ್ ರಜೆಯಲ್ಲಿ ಊರಿಗೆ ಬಂದು ಮರಳಿದ್ದರು. ಅವರು ಗಲ್ಫ್‌ಗೆ ಹೋದ ನಾಲ್ಕು ದಿನಗಳ ಬಳಿಕ ಅವರ ಸಹೋದರ ಅನ್ವರ್ ಹಾಗೂ ಸ್ನೇಹಿತ ಅನ್ಸಾರ್ ಎಂಬವರನ್ನು ಕೊಟೇಶನ್ ತಂಡವೊಂದು ಅಪಹರಿಸಿ ಪೈವಳಿಕೆಯ ಮನೆಯೊಂದರಲ್ಲಿ ದಿಗ್ಬಂಧನದಲ್ಲಿರಿಸಿತ್ತು. ಬಳಿಕ ಅವರ ಮೂಲಕ ಅಬೂಬಕರ್ ಸಿದ್ದಿಕ್‌ಗೆ ಫೋನ್ ಕರೆ ಮಾಡಿಸಿ ತಕ್ಷಣ ಊರಿಗೆ ಬರುವಂತೆ ತಿಳಿಸಲಾಗಿದೆ. ಇದರಂತೆ 2022 ಜೂನ್ 26ರಂದು ಬೆಳಿಗ್ಗೆ ಊರಿಗೆ ತಲುಪಿದ ಅಬೂಬಕರ್ ಸಿದ್ದಿಕ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅವರಿಗೆ ಫೋನ್ ಕರೆಯೊಂದು ಬಂದಿತ್ತು. ಅನಂತರ ಪೈವಳಿಕೆಗೆ ಹೋಗಿಬರುವುದಾಗಿ ಮನೆಯವರಲ್ಲಿ ತಿಳಿಸಿ ಹೋದ ಅಬೂಬಕರ್ ಸಿದ್ದಿಕ್ ರಾತ್ರಿಯಾದರೂ ಮರಳಿ ಬಂದಿರಲಿಲ್ಲ. ಇದೇ ವೇಳೆ ಅಬೂಬಕರ್ ಸಿದ್ದಿಕ್‌ರನ್ನು ತಂಡ ವೊಂದು ಅಪಹರಿಸಿ ಪೈವಳಿಕೆಯ ಮನೆ ಯೊಂದರಲ್ಲಿ ಕೂಡಿ ಹಾಕಿ ಪೈಶಾಚಿಕ ರೀತಿಯಲ್ಲಿ ಹಿಂಸೆ ನೀಡಿತ್ತೆನ್ನಲಾಗಿದೆ. ಬಳಿಕ ಅಬೂಬಕರ್ ಸಿದ್ದಿಕ್ ಸಾವಿಗೀ ಡಾದರೆಂದು ಖಚಿತಗೊಂಡಾಗ ಮೃತ ದೇಹವನ್ನು ಬಂದ್ಯೋಡಿನ ಆಸ್ಪತ್ರೆಗೆ ತಲುಪಿಸಿ ತಂಡ ಪರಾರಿಯಾಗಿತ್ತು. ಇದೇ ವೇಳೆ ತಂಡ ದಿಗ್ಬಂಧನದಲ್ಲಿರಿಸಿ ಅನ್ವರ್ ಹಾಗೂ ಅನ್ಸಾರ್ ಎಂಬಿವರಿಗೂ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿ ತ್ತೆಂದು ದೂರಲಾಗಿದೆ. ಈ ಪ್ರಕರಣದಲ್ಲಿ ಅನ್ಸಾರಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಅಂದು 17 ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು.
ಚಿನ್ನ ಖರೀದಿಸಲು ಗಲ್ಫ್‌ಗೆ ಕಳುಹಿಸಿಕೊಟ್ಟ 40 ಲಕ್ಷ ರೂಪಾ ಯಿಯ ಡಾಲರ್ ನಾಪತ್ತೆಯಾಗಿ ರುವುದೇ ಅಪಹರಣ, ಆಕ್ರಮಣ, ಕೊಲೆ ಕೃತ್ಯಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಕೆಲವರ ಪತ್ತೆಗಾಗಿ ಪೊಲೀಸರು ಲುಕೌಟ್ ನೋಟೀಸು ಹೊರಡಿಸಿದ್ದರು. ಆದರೆ ಅವರನ್ನು ಪತ್ತೆಹ ಚ್ಚಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತನಿಖೆ ಯನ್ನು ಕ್ರೈಂಬ್ರಾಂಚ್‌ಗೆ ಬಿಟ್ಟುಕೊಡಲಾಗಿದೆ ಎಂದು ತಿಳಿದು ಬಂದಿದೆ.