ಗಲ್ಫ್ ಉದ್ಯಮಿಯ ಕೊಲೆ ಪ್ರಕರಣ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಜಿಲ್ಲಾ ನ್ಯಾಯಾಲಯ ಆದೇಶ

ಕಾಸರಗೋಡು:?ಗಲ್ಫ್ ಉದ್ಯಮಿ ಪಳ್ಳಿಕ್ಕರೆ ಪೂಚಕ್ಕಾಡ್ನ ಅಬ್ದುಲ್ ಗಫೂರ್ ಹಾಜಿ (55) ಅವರ ಕೊಲೆ ಹಾಗೂ ಮನೆಯಿಂದ 596 ಪವನ್ ಚಿನ್ನಾಭರಣ ಕಾಣೆಯಾದ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್ನಲ್ಲಿರುವ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಬಿಡುವಂತೆ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಆದೇಶಿಸಿದೆ. ಬಾರ ಮೀತಲ್ ಮಾಂuಟಿಜeಜಿiಟಿeಜಡ್ ಬೈತುಲ್ ಫಾತಿಮ್ನ ಟಿ.ಎಂ. ಉಬೈಸ್ ಯಾನೆ ಉವೈಸ್ (32), ಪತ್ನಿ ಕೆ.ಎಚ್. ಶಮೀನ ಯಾನೆ ಜಿನ್ನುಮ್ಮ (34), ಪಳ್ಳಿಕ್ಕೆರೆ ಮುಕ್ಕೂಡ್ ಜಿಲಾನಿ ನಗರದಲ್ಲಿ ವಾಸಿಸುವ ಪೂಚಕ್ಕಾಡ್ ವಲಿಯಪಳ್ಳಿ ಎಂಬಲ್ಲಿಗೆ ಸಮೀಪದ ಪಿ.ಎಂ. ಅಸ್ನೀಫ (43), ಮಧೂರು ಕೊಲ್ಯದ ಆಯಿಶ (42) ಎಂಬಿವರು ಪ್ರಕರಣದ ಆರೋಪಿಗಳಾಗಿದ್ದಾರೆ. 2024 ಡಿಸೆಂಬರ್ 5ರಂದು ಇವರನ್ನು ಪ್ರತ್ಯೇಕ ತನಿಖಾ ತಂಡ ಬಂಧಿಸಿತ್ತು. ಆರೋಪಿಗಳನ್ನು ಹೊಸದುರ್ಗ ನ್ಯಾಯಾಲಯ ಈ ಹಿಂದೆ ನಾಲ್ಕು ದಿನಗಳ ಕಾಲ ಕಸ್ಟಡಿಗೆ ಬಿಟ್ಟುಕೊಟ್ಟಿತ್ತು. ಡಿಸೆಂಬರ್ 11ರಂದು ಮರಳಿ ನ್ಯಾಯಾಲಯ ದಲ್ಲಿ ಹಾಜರುಪಡಿಸಲಾಗಿತ್ತು. ಹೆಚ್ಚಿನ ತನಿಖೆಗಾಗಿ ಇನ್ನೊಮ್ಮೆ ಕಸ್ಟಡಿಗೆ ಬಿಟ್ಟುಕೊಡಬೇಕೆಂದು ಆಗ್ರಹಿಸಿ ಪೊಲೀಸರು ಅರ್ಜಿ ಸಲ್ಲಿಸಿದ್ದರು. ಆದರೆ ಹೊಸದುರ್ಗ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕಸ್ಟಡಿಗೆ ಬಿಟ್ಟುಕೊಡುವಂತೆ ವಿನಂತಿಸಿ ಪ್ರತ್ಯೇಕ ತನಿಖಾ ತಂಡ ಜಿಲ್ಲಾ ನ್ಯಾಯಾಲಯವನ್ನು ಸಮೀಪಿಸಿತ್ತು. 2023 ಎಪ್ರಿಲ್ 13ರಂದು ರಾತ್ರಿ ಅಬ್ದುಲ್ ಗಫೂರ್ ಹಾಜಿ ಮನೆಯೊಳಗೆ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕಾಣೆಯಾದ ಚಿನ್ನಾಭರಣಗಳ ಪೈಕಿ 103 ಪವನ್ ಚಿನ್ನ ಮಾತ್ರವೇ ಪತ್ತೆಯಾಗಿದೆ. ಬಾಕಿ ಚಿನ್ನವನ್ನು ಪತ್ತೆಹಚ್ಚುವ ಅಂಗವಾಗಿ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆದುಕೊಳ್ಳಲು ತನಿಖಾತಂಡ ತೀರ್ಮಾನಿಸಿತ್ತು.

You cannot copy contents of this page