ಗಲ್ಫ್ ಉದ್ಯೋಗಿ ಮನೆಯಿಂದ ಚಿನ್ನಾಭರಣ ಕಳವು : ಬೀಗ ಜಡಿದ ಮನೆಗಳನ್ನು ಕೇಂದ್ರೀಕರಿಸಿ ಕಳ್ಳರ ದಾಳಿ
ಉಪ್ಪಳ: ಬೀಗ ಜಡಿದ ಮನೆಗಳನ್ನು ಕೇಂದ್ರೀಕರಿಸಿ ಕಳವು ಕೃತ್ಯ ಮತ್ತೆ ಮುಂದುವರಿದಿದೆ. ಉಪ್ಪಳ ಬಳಿಯ ಹಿದಾಯತ್ ಬಜಾರ್‌ನ ಮಾಹಿನ್ ಹಾಜಿ ರಸ್ತೆಯಲ್ಲಿರುವ ಗಲ್ಫ್ ಉದ್ಯೋಗಿ ಮೊಯ್ದೀನ್ ಕುಂಞಿ ಎಂಬವರ ಮನೆಯಿಂದ ಆರೂವರೆ ಪವನ್ ಚಿನ್ನಾಭರಣ ಕಳವಿಗೀಡಾಗಿದೆ. ಮೊಯ್ದೀನ್ ಕುಂಞಿಯವರ ಪತ್ನಿ ಅವ್ವಾಬಿ ಮನೆಗೆ ಬೀಗ ಜಡಿದು ಸಂಬಂಧಿಕರ ಮನೆಗೆ ತೆರಳಿದ್ದರು. ನಿನ್ನೆ ಸಂಜೆ ಈ ಮನೆಯ ಬಾಗಿಲು ತೆರೆದಿಟ್ಟಿರುವುದು ಸ್ಥಳೀಯರಗಮನಕ್ಕೆ ಬಂದಿದೆ, ಇದರಿಂದ ಮನೆಗೆ ತೆರಳಿ ನೋಡಿದಾಗ ಬಾಗಿಲಿನ ಬೀಗ ಮುರಿ ದಿರುವುದು ಕಂಡುಬಂದಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಮನೆಯವರು ತಲುಪಿ ಪರಿಶೀಲಿಸಿದಾಗ ಕಪಾಟಿನ ಲ್ಲಿರಿಸಿದ್ದ ಚಿನ್ನಾಭರಣ ಕಳವಿಗೀಡಾ ಗಿರುವುದು ತಿಳಿದುಬಂದಿದೆ. ಈ ಬಗ್ಗೆ ಅವ್ವಾಬಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಲುಪಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಕೆಲವು ದಿನಗಳಿಂದ ಬೀಗ ಜಡಿದ ಮನೆಗಳನ್ನು ಕೇಂದ್ರೀಕರಿಸಿ ಕಳ್ಳರು ತಮ್ಮ ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ. ಉಪ್ಪಳ ಹಾಗೂ ಪರಿಸರ ಪ್ರದೇಶಗಳಲ್ಲಿ ಈ ಹಿಂದೆ ಹಲವು ಮನೆಗಳಿಂದ ಇದೇ ರೀತಿ ಕಳವು ನಡೆದಿತ್ತು.
ಕುಂಬಳೆ ಠಾಣೆ ವ್ಯಾಪ್ತಿಯ ಬೇಕೂರು ಶಾಂತಿಗುರಿ ನಿವಾಸಿ ಗಲ್ಫ್ ಉದ್ಯೋಗಿ ಸಮೀರ್ ಎಂಬವರ ಮನೆಯಿಂದ ಏಳೂವರೆ ಪವನ್ ಚಿನ್ನಾಭರಣ ಕಳವಿಗೀಡಾದ ಘಟನೆಯೂ ಇತ್ತೀಚೆಗೆ ನಡೆದಿತ್ತು.