ಗುಜರಿ ಅಂಗಡಿಯಿಂದ 3ನೇ ಬಾರಿ ಕಳವುಗೈದು ಪರಾರಿ ವೇಳೆ ನಾಗರಿಕರ ಕೈಗೆ ಸಿಕ್ಕಿಬಿದ್ದ ಕಳ್ಳರು: ಇಬ್ಬರ ಬಂಧನ
ಉಪ್ಪಳ: ಎರಡು ಬಾರಿ ವಿವಿಧ ಸೊತ್ತುಗಳನ್ನು ಕಳವುಗೈದು ಪರಾರಿಯಾದ ಕಳ್ಳರು ಮೂರನೇ ಬಾರಿ ನಾಗರಿಕರ ಕೈಯಲ್ಲಿ ಸಿಲುಕಿದ ಘಟನೆ ನಡೆದಿದೆ. ಬಳಿಕ ಅವರನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು, ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕದ ಹಾಸನ ಬೇಳೂರು ಅಂಗಡಿ ಹಳ್ಳಿಯ ಬಬ್ರುವಾಹನ ಯಾನೆ ಅಶೋಕ್ (23), ತಮಿಳುನಾಡಿನ ಶಿರಿಮಂಗಲಂ ಮಾವಾಟ್ಟಂ ಕಲ್ಲಗುಮುಚ್ಚಿಯ ಹರಿಶ್ಚಂದ್ರ (35) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಪೊಸೋಟು ನಲ್ಲಿರುವ ಬಡಾಜೆಯ ಕರೀಂ ಎಂಬವರ ಮಾಲಕತ್ವದ ಗುಜರಿ ಅಂಗಡಿಯಿಂದ ಶನಿವಾರ ರಾತ್ರಿ ಕಳವು ನಡೆದಿದೆ. ಒಂದು ಕಿಲೋ ಹಿತ್ತಾಳೆ ಸಾಮಗ್ರಿಗಳು, ಎರಡು ಸಿಸಿ ಟಿವಿ ಕ್ಯಾಮರಾಗಳನ್ನು ಆರೋಪಿಗಳು ಕಳವು ನಡೆಸಿದ್ದರು. ಕಳವುಗೈದ ಸಾಮಗಿ ಗಳೊಂದಿಗೆ ರಾತ್ರಿ 12 ಗಂಟೆ ವೇಳೆ ಮಂಜೇಶ್ವರ ರೈಲ್ವೇ ನಿಲ್ದಾಣಕ್ಕೆ ತಲುಪಿದ ಈ ಇಬ್ಬರನ್ನು ಕಂಡ ನಾಗರಿಕರಿಗೆ ಸಂಶಯವುಂಟಾಗಿತ್ತು. ಇದರಿಂದ ಅವರ ಕೈಯಲ್ಲಿದ್ದ ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ ಹಿತ್ತಾಳೆ ಸಾಮಗ್ರಿಗಳು ಹಾಗೂ ಸಿಸಿಟಿವಿ ಕ್ಯಾಮರಾಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸರನ್ನು ಕರೆಸಿ ಅವರನ್ನು ಹಸ್ತಾಂತರಿಸಲಾಯಿತು. ಪೊಲೀಸರು ತನಿಖೆಗೊಳಪಡಿಸಿದಾಗ ಕರೀಂರ ಗುಜರಿ ಅಂಗಡಿಯಲ್ಲಿ ಕಳವು ನಡೆಸಿದ ವಿಷಯ ತಿಳಿದು ಬಂದಿದೆ.
ಇದೇ ಅಂಗಡಿಯಿಂದ ಈ ಹಿಂದೆ ಎರಡು ಬಾರಿ ಕಳವು ನಡೆದಿತ್ತು. ಅಂದು ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳಲ್ಲಿ ಕಂಡು ಬಂದ ವ್ಯಕ್ತಿಗಳು ಪ್ರಸ್ತುತ ಸೆರೆಗೀಡಾದ ಅಶೋಕ್ ಹಾಗೂ ಹರಿಶ್ಚಂದ್ರ ಎಂಬಿವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.