ಘಟಾನುಘಟಿಗಳ ಜಿದ್ದಾಜಿದ್ದಿನ ಹೋರಾಟ ಕಣ ತಿರುವನಂತಪುರ
ತಿರುವನಂತಪುರ: ತಿರುವನಂತಪುರ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆ ಇಡೀ ದೇಶದ ಅತ್ಯಂತ ಗಮನಾರ್ಹ ಕೇಂದ್ರವಾಗಿ ಈಗ ಮಾರ್ಪಟ್ಟಿದೆ. ಯಾಕೆಂದರೆ ಇದು ಇಡೀ ಕೇರಳದಲ್ಲೇ ಬಿಜೆಪಿ ಅತೀ ಹೆಚ್ಚು ಗೆಲುವಿನ ನಿರೀಕ್ಷೆ ಇರಿಸಿಕೊಂಡಿರುವ ಕ್ಷೇತ್ರವಾಗಿದೆ. ಘಟಾನುಘಟಿ ನೇತಾರರ ನಡುವೆ ಪರಸ್ಪರ ಜಿದ್ದಾಜಿದ್ದಿನ ಹೋರಾಟ ನಡೆಯುವ ಕ್ಷೇತ್ರವೂ ಇದಾಗಿದೆ.
ಇಲ್ಲಿ ಬಿಜೆಪಿ (ಎನ್ಡಿಎ) ಉಮೇದ್ವಾರರಾಗಿ ಕೇಂದ್ರಸಚಿವ ರಾಜೀವ್ ಚಂದ್ರಶೇಖರನ್, ಯುಡಿಎಫ್ ಅಭ್ಯರ್ಥಿಯಾಗಿ ಕಾಂಗ್ರೆಸ್ನ ಹಿರಿಯ ನೇತಾರ, ಮಾಜಿ ಕೇಂದ್ರ ಸಚಿವರು ಈ ಕ್ಷೇತ್ರದಲ್ಲಿ ಕಳೆದ ಮೂರು ಬಾರಿ ಸತತವಾಗಿ ಗೆಲುವು ಸಾಧಿಸಿರುವ ಹಾಲಿ ಸಂಸದ ವಿಶ್ವಪ್ರಜೆ ಎಂದೇ ಖ್ಯಾತ ರಾಗಿರುವ ಶಶಿತರೂರ್ ಸ್ಪರ್ಧಿಸುತ್ತಿದ್ದಾರೆ. ಎಡರಂಗದ ಉಮೇದ್ವಾರರಾಗಿ ಸಿಪಿಐ. ಹಿರಿಯ ನೇತಾರ ಈ ಹಿಂದೆ ಇದೇ ಕ್ಷೇತ್ರದಲ್ಲಿ ಗೆದ್ದು ಸಂಸದರಾಗಿ ಅನುಭವಸಂಪತ್ತು ಹೊಂದಿರುವ ಸೌಮ್ಯವಾದಿ ನಾಯಕ ಎಂದೇ ಕರೆಯಲಾಗುತ್ತಿರುವ ಪನ್ಯನ್ ರವೀಂದ್ರನ್ ಸ್ಪರ್ಧಿಸುತ್ತಿದ್ದಾರೆ. ಆದ್ದರಿಂದ ಈ ಕ್ಷೇತ್ರ ಘಟಾನುಘ ಟಿಗಳು ಪರಸ್ಪರ ಹೋರಾಟಕ್ಕಿಳಿದಿ ರುವ ಒಂದು ಪ್ರತಿಷ್ಠಿತ ಕ್ಷೇತ್ರವಾಗಿದೆ.
ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ತಿರುವನಂತಪುರ, ನೆಯ್ಯಾಟಿಂಗರ, ನೇಮಂ, ಕೋವಳಂ, ವಟ್ಟಿಯೂರುಕಾವು, ಪಾರಶ್ಶಾಲ, ಕಳಕ್ಕೂಟಂ ವಿಧಾನ ಸಭಾ ಕ್ಷೇತ್ರಗಳು ಒಳಗೊಂಡಿವೆ. ೧೯೫೭ರಲ್ಲಿ ಈ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ.
೨೦೧೯ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ನ ಶಶಿ ತರೂರ್ ೪,೧೬,೧೩೧ (ಶೇ. ೪೧.೧೫) ಮತಗಳಿಸಿ ೯೯,೯೮೯ ಮತಗಳ ಭಾರೀ ಅಂತರದಲ್ಲಿ ಗೆಲುವು ಸಾಧಿ ಸಿದ್ದರು. ಈ ಮೂಲಕ ಲೋಕಸಭೆಗೆ ನಿರಂತರವಾಗಿ ಮೂರನೇ ಬಾರಿಗೆ ಆಯ್ಕೆಯಾಗಿದ್ದರು.
ಬಿಜೆಪಿ ಉಮೇದ್ವಾರ ಕುಮ್ಮನಂ ರಾಜಶೇಖರನ್ ೩,೧೬,೧೪೨ (ಶೇ. ೩೧.೨೬)ಮತಗಳಿಸಿ ಎರಡನೇ ಸ್ಥಾನಿಯಾಗಿ ಸಂತೃಪ್ತಿಪಡಬೇಕಾಗಿ ಬಂದಿತ್ತು. ಅಂದು ಸಿಪಿಐ (ಎಡರಂಗ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿ. ದಿವಾಕರನ್ರಿಗೆ ೨,೫೮,೫೫೬ (ಶೇ. ೨೫.೮೦) ಮತ ಪಡೆದು ತೃತೀಯ ಸ್ಥಾನ ಪಡೆದಿದ್ದರು. ಅಂದು ಶೇ. ೭೩.೭೪ ಮತದಾನ ಉಂಟಾಗಿತ್ತು.