ಚಂದ್ರಗಿರಿ ಹೊಳೆಗೆ ಹಾರಿದ ಸಿಮೆಂಟ್ ವ್ಯಾಪಾರಿಯ ಮೃತದೇಹ ಪತ್ತೆ
ಕಾಸರಗೋಡು: ಚಂದ್ರಗಿರಿ ಹೊಳೆಗೆ ಹಾರಿ ನಾಪತ್ತೆಯಾಗಿದ್ದ ಸಿಮೆಂಟ್ ವ್ಯಾಪಾರಿಯ ಮೃತದೇಹ ಪತ್ತೆಯಾ ಗಿದೆ. ರಾವಣೀಶ್ವರ ಮುಕ್ಕೂಡ್ ಪಾಲಕ್ಕಲ್ ಹೌಸ್‌ನ ಅಚ್ಯುತನ್- ರಾಧಾ ದಂಪತಿಯ ಪುತ್ರ ಎಂ. ಅಜೀಶ್ (32) ಎಂಬವರ ಮೃತದೇಹ ಇಂದು ಮುಂಜಾನೆ ಚೆಂಬರಿಕ ಕಡಪ್ಪುರದಲ್ಲಿ ಪತ್ತೆಯಾಗಿದೆ. ಅಜೀಶ್ ಮುಕ್ಕೂಡ್ ಹಾಗೂ ಕಳರಿಕ್ಕಾಲ್ ಎಂಬೆಡೆ ಗಳಲ್ಲಿರುವ ಎರಡು ಸಿಮೆಂಟ್ ಅಂಗಡಿಗಳ ಮಾಲಕನಾಗಿದ್ದಾರೆ. ಡಿವೈಎಫ್‌ಐ ರಾವಣೀಶ್ವರ ವಲಯ ಸಮಿತಿ ಸದಸ್ಯರೂ ಆಗಿದ್ದರು.
ಇವರು ಆತ್ಮಹತ್ಯೆಗೈಯ್ಯುವುದಾಗಿ ಸ್ನೇಹಿತರಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದರೆಂದು ಹೇಳಲಾಗುತ್ತಿದೆ. ಅನಂತರ ನಿನ್ನೆ ಸಂಜೆ 3 ಗಂಟೆಗೆ ಬೈಕ್‌ನಲ್ಲಿ ಪ್ರಯಾಣಿಸಿದ ಅಜೀಶ್ ಚಂದ್ರಗಿರಿ ಸೇತುವೆಯ ಮೇಲಿಂದ ಹೊಳೆಗೆ ಹಾರಿದ್ದರು. ಈ ಘಟನೆಯನ್ನು ಕಂಡವರು ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ಪೊಲೀಸ್, ಅಗ್ನಿಶಾಮಕದಳ ಹಾಗೂ ನಾಗರಿಕರು ಸೇರಿ ಹೊಳೆಯಲ್ಲಿ ಶೋಧ ಆರಂಭಿಸಿದ್ದರು. ಆದರೆ ನೀರಿನ ಹರಿವು ಹೆಚ್ಚಿದ್ದ ಹಿನ್ನೆಲೆಯಲ್ಲಿ ಶೋಧ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಇಂದು ಮುಂಜಾನೆ ಅವರ ಮೃತದೇಹ ಚೆಂಬರಿಕ ಕಡಪ್ಪುರದಲ್ಲಿ ಪತ್ತೆಯಾಗಿದೆ. ಆರ್ಥಿಕ ಸಂದಿಗ್ಧತೆಯೇ ಆತ್ಮಹತ್ಯೆಗೆ ಕಾರಣವೆಂದು ಸಂಶಯಿಸಲಾಗಿದೆ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ. ಮೃತರು ಪತ್ನಿ ಸಜಿನ, ಇಬ್ಬರು ಮಕ್ಕಳು, ಸಹೋದರ ಅಭಿಲಾಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.