ಚೌಕಿ, ಪೇರಾಲ್‌ನಲ್ಲಿ ‘ಪ್ರೇತ’ ವದಂತಿ ಸುಳ್ಳು : ಸಾಮಾಜಿಕ ಜಾಲತಾಣದಲ್ಲಿರುವ ಚಿತ್ರಗಳು ನಕಲಿ, ಇಲ್ಲಿದೆ ಇದರ ಸತ್ಯಾವಸ್ಥೆ
ಕಾಸರಗೋಡು: ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಕೆಲವೆಡೆ ವಾಟ್ಸಪ್ ಗ್ರೂಪ್‌ಗಳಲ್ಲಿ ‘ಪ್ರೇತ’ ಎಂಬ ಹೆಸರಲ್ಲಿ ಕೆಲವು ಚಿತ್ರಗಳು ಭಾರೀ ವೈರಲ್ ಆಗಿದೆ. ಅದರ ಜತೆಗೆ ಇಬ್ಬರು ಬೈಕ್ ಸವಾರರು ಪ್ರೇತವನ್ನು ಕಂಡಿರುವುದಾಗಿ ಆಡಿಯೋ ಸಂದೇಶದಲ್ಲಿ ತಿಳಿಸಲಾಗಿದೆ. ಮಧ್ಯರಾತ್ರಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಜಾಗ್ರತೆ ಪಾಲಿಸಬೇಕೆಂದೂ ಸಂದೇಶದಲ್ಲಿ ತಿಳಿಸಲಾಗಿದೆ. ಮಾತ್ರವಲ್ಲದೆ ಬೈಕ್ ಅಪಘಾತದಲ್ಲಿ ಗಾಯಗೊಂಡ ಯುವಕನ ಫೊಟೋವನ್ನು ಕೂಡಾ ಪ್ರಚಾರ ಮಾಡಲಾಗುತ್ತಿದೆ.
ಮೊಗ್ರಾಲ್ ಪುತ್ತೂರು ಚೌಕಿ ಹಾಗೂ ಕುಂಬಳೆ ಪೇರಾಲ್‌ನಲ್ಲಿ ಬೈಕ್ ಸವಾರರು ಪ್ರೇತವನ್ನು ಕಂಡಿರುವುದಾಗಿ ಪ್ರಚಾರ ಮಾಡಲಾಗಿದೆ. ಆದರೆ ಇದೊಂದು ಸುಳ್ಳು ಸುದ್ಧಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಭಾರತದಲ್ಲಿ ಟಿಕ್‌ಟೋಕ್‌ನ ಅಂಗವಾಗಿ ತಯಾರಿಸಿದ ಚಿತ್ರ ಹಾಗೂ ವೀಡಿಯೋಗಳನ್ನು ಈಗ ಕಾಸರಗೋಡಿನಲ್ಲಿ ಭಾರೀ ಪ್ರಚಾರ ನಡೆಸಿ ಅದರ ಜತೆಗೆ ಸುಳ್ಳು ಸಂದೇಶವನ್ನು ರವಾನಿಸಲಾಗುತ್ತಿದೆ. ಕಳೆದ ಜುಲೈ ೧೮ರಂದು ಉತ್ತರ ಪ್ರದೇಶದ ಅಮೇಟಿಯಲ್ಲಿ ಇದೇ ಚಿತ್ರ ಹಾಗೂ ವೀಡಿಯೋವನ್ನು ಪ್ರಚಾರ ಮಾಡಲಾಗಿತ್ತು. ಸಂಗ್ರಾಂಪುರ್‌ನಲ್ಲಿ ವೀಡಿಯೋ ಪ್ರಚಾರ ಮಾಡಲಾಗಿತ್ತು. ಅಲ್ಲಿ ಕೂಡಾ ಈ ಬಗ್ಗೆ ತನಿಖೆ ನಡೆಸಿದಾಗ ಕೆಲವು ಚಿತ್ರಗಳನ್ನು ಎಡಿಟ್ ಮಾಡಿ ಹೀಗೆ ಪ್ರಚಾರ ನಡೆಸಿರುವುದಾಗಿ ತಿಳಿದು ಬಂದಿತ್ತು. ಕಳೆದ ಮೇ ತಿಂಗಳು ಮಲೇಶ್ಯಾದ ಕಂಪಾರ್‌ನಲ್ಲಿ ಪ್ರೇತವನ್ನು ಕಂಡಿರುವುದಾಗಿ ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ನಡೆಸಲಾಗಿತ್ತು. ಕಂಪಾರ್‌ನಲ್ಲಿ ನಿರ್ಜನ ರಸ್ತೆಯಲ್ಲಿ ಪ್ರೇತ ಇತ್ತೆಂಬ ಸುಳ್ಳು ವದಂತಿ ಟಿಕ್‌ಕೋಟ್‌ನಲ್ಲಿ ವೈರಲ್ ಆಗಿತ್ತು. ಕಾಸರಗೋಡಿನಲ್ಲಿ ಪ್ರಚಾರಗೈಯ್ಯಲಾದ ಚಿತ್ರಗಳನ್ನೇ ಅಲ್ಲಿಯೂ ವೈರಲ್ ಮಾಡಲಾಗಿತ್ತು.