ಜನವಾಸ ಕೇಂದ್ರಗಳಿಗೆ ತಲುಪಿದ ಚಿರತೆಗಳನ್ನು ಓಡಿಸಲು ಪಟಾಕಿ ಸಿಡಿಸುವ ಕ್ರಮ ಆರಂಭ
ಕಾಸರಗೋಡು: ಕಾಡಿಗೆ ಮರಳಲು ಮನಸ್ಸಿಲ್ಲದೆ ಊರಿನಲ್ಲೇ ತಿರುಗಾಡುತ್ತಿರುವ ಚಿರತೆಗಳನ್ನು ಕಾಡಿನೊಳಗೆ ಓಡಿಸಲು ಕ್ರಮ ಆರಂಭಗೊಂಡಿತು. ಅರಣ್ಯ ಇಲಾಖೆಯ ರೇಂಜ್ ಆಫೀಸರ್ ಸಿ.ವಿ. ವಿನೋದ್ ಕುಮಾರ್‌ರ ನೇತೃತ್ವದಲ್ಲಿ ಕ್ರಮ ಆರಂಭಿಸಲಾಗಿದೆ. ಪಟಾಕಿ ಸಿಡಿಸಿ ಚಿರತೆಗಳನ್ನು ಕಾಡಿಗಟ್ಟಲಿರುವ ಯತ್ನ ಆರಂಭಿಸಲಾಗಿದೆ. ಮೂರು ತಂಡಗಳಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳು ತಲುಪಿದ ಮಂಜಕಲ್, ಕುಣಿಯೇರಿ, ನೈಯ್ಯಂಗಯ, ಕೊಟ್ಟಂಗುಳಿ, ಕಲ್ಲಳಿಕ್ಕಾಲ್ ಪ್ರದೇಶಗಳಲ್ಲಿ ಈಗ ಚಿರತೆಯನ್ನು ಓಡಿಸಲು ಯತ್ನ ಆರಂಭಿಸಿದ್ದಾರೆ. ಪ್ರದೇಶಗಳಲ್ಲಿ ಕಂಡು ಬಂದ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಗೂಡು ಸಿದ್ಧಪಡಿಸಿತ್ತು. ಆದರೆ ಅದರಲ್ಲಿ ಸಿಲುಕಿಕೊಂಡಿರಲಿಲ್ಲ. ಬದಲಾಗಿ ಸಮೀಪ ಪ್ರದೇಶಗಳಲ್ಲೂ ಚಿರತೆಗಳು ಕಂಡು ಬರುವ ಸನ್ನಿವೇಶ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳನ್ನು ಮತ್ತೆ ಕಾಡಿನತ್ತ ಓಡಿಸಲು ಪಟಾಕಿ ಸಿಡಿಸಲು ಕ್ರಮ ಆರಂಭಿಸಿರುವುದು. ಪಟಾಕಿಯ ಶಬ್ದ ಪ್ರಾಣಿಗಳಿಗೆ ಅಸ್ವಸ್ಥತೆ ಉಂಟುಮಾಡ ಬಹುದಾಗಿದ್ದು ಅವುಗಳು ಜನವಾಸ ಪ್ರದೇಶಗಳಿಂದ ಓಡಿಹೋಗಬಹುದೆಂದು ತಜ್ಞರು ಉಪದೇಶಿಸಿದ ಹಿನ್ನೆಲೆಯಲ್ಲಿ ಈ ಯತ್ನ ಆರಂಭಿಸಲಾಗಿದೆ.