ಜನಸಂಖ್ಯೆಯಲ್ಲಿ ಭಾರತ ಈಗ ವಿಶ್ವದಲ್ಲೇ ನಂ.1
ನವದೆಹಲಿ: ದೇಶದ ಜನಸಂಖ್ಯೆ 144 ಕೋಟಿ ದಾಟಿದೆ. 142.5 ಕೋಟಿ ಜನಸಂಖ್ಯೆ ಹೊಂದಿರುವ ಚೀನಾವನ್ನು ಹಿಂದಿಕ್ಕುವ ಮೂಲಕ ಭಾರತ ಇಡೀ ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ದೇಶವಾಗಿ ಈಗ ಹೊರ ಹೊಮ್ಮಿದೆ. ಭಾರತದ ಜನಸಂಖ್ಯೆ ಈಗ 144.17ಕೋಟಿ ದಾಟಿದ್ದು, ಇದರಲ್ಲಿ 0-14 ವರ್ಷದವರ ಪ್ರಮಾಣ ಶೇಕಡಾ 24ರಷ್ಟಾಗಿದೆ. 10ರಿಂದ 24 ವಯೋಮಿತಿಯವರ ಸಂಖ್ಯೆ ಶೇ. 26ರಷ್ಟಿದೆ. 15ರಿಂದ 64 ವರ್ಷ ವಯಸ್ಸಿನವರ ಸಂಖ್ಯೆ ಶೇ. 68, 65ಕ್ಕಿಂತ ಮೇಲ್ಪಟ್ಟವರ ಸಂಖ್ಯೆ ಶೇ. 7ರಷ್ಟು ಇದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ವರದಿಯಲ್ಲಿ ತಿಳಿಸಲಾಗಿದೆ.
ಮುಂದಿನ 77 ವರ್ಷದಲ್ಲಿ ಭಾರತದ ಜನಸಂಖ್ಯೆ ಪ್ರಮಾಣ ದುಪ್ಪಟ್ಟಾಗಲಿದೆ ಎಂದು ಯುಎನ್ಎಫ್ಸಿಎ ವರದಿ ತಿಳಿಸಿದೆ. 2011ರಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆಸಿದಾಗ ಭಾರತದ ಜನಸಂಖ್ಯೆ 121 ಕೋಟಿ ಆಗಿತ್ತು. ಅದು ಈಗ 144.17 ಕೋಟಿಗೇರಿದೆ. ಭಾರತದಲ್ಲಿ ಪುರುಷರ ಜೀವಿತಾವಧಿ ಸರಾಸರಿ 71 ವರ್ಷ ಮತ್ತು ಮಹಿಳೆಯರ ಸರಾಸರಿ ಆಯಸ್ಸು 74 ವರ್ಷಗಳಾಗಿವೆ. ವರದಿಯ ಅನ್ವಯ 2006ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಬಾಲ್ಯವಿವಾಹ ಪ್ರಮಾಣ ಶೇ. 23ಕ್ಕೇರಿದೆ ಎಂದು ತಿಳಿಸಲಾಗಿದೆ.