ಜಮ್ಮು ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಅಟ್ಟಹಾಸ: ಹಲವೆಡೆಗಳಲ್ಲಿ ಗುಂಡಿನ ಚಕಮಕಿ
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಇನ್ನೂ ಮುಂದು ವರಿದಿದೆ. ಭಯೋತ್ಪಾದಕರು ದಕ್ಷಿಣ ಕಾಶ್ಮೀರದ ಕುಲ್‌ಗಾಂ ಜಿಲ್ಲೆಯಲ್ಲಿ ಮತ್ತೆ ದಾಳಿ ನಡೆಸಿದ್ದು, ಅವರನ್ನು ಹಿಮ್ಮೆಟ್ಟಿಸಲು ಭದ್ರತಾಪಡೆ ಪ್ರತಿದಾಳಿ ನಡೆಸಿದೆ. ಆಗ ಅಲ್ಲಿ ಭಾರೀ ಗುಂಡಿನ ಚಕಮಕಿ ನಡೆದಿದೆ. ಇದು ಕಳೆದ 15 ದಿನಗಳಲ್ಲಿ ನಡೆದ 11ನೇ ಎನ್‌ಕೌಂಟರ್ ಆಗಿದೆ.
ಜಮ್ಮು ಕಾಶ್ಮೀರದ 20 ಜಿಲ್ಲೆಗಳ ಪೈಕಿ ೮ ಜಿಲ್ಲೆಗಳಲ್ಲಿ ಭಯೋತ್ಪಾದ ಕರನ್ನು ಹೊಡೆದುರುಳಿಸಲು ಭದ್ರತಾಪಡೆ ಭಾರೀ ಎನ್‌ಕೌಂಟರ್ ಆರಂಭಿಸಿದೆ. ಈ ಎನ್‌ಕೌಂಟರ್‌ನಲ್ಲಿ ಕಳೆದವಾರ 10 ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ. ಈ ಕಾದಾಟ ದಲ್ಲಿ ಭಾರತೀಯ ಭದ್ರತಾಪಡೆಯ ಕಮಾಂಡರ್ ಓರ್ವರು ಹುತಾತ್ಮರಾಗಿದ್ದಾರೆ.
ಆರ್ಟಿಕಲ್ 370 ರದ್ದತಿಯ ನಂತರ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಒಮ್ಮರ್ ಅಬ್ದುಲ್ಲ ನೇತೃತ್ವದ ಎನ್‌ಸಿ ಸರಕಾರ ಅಕ್ಟೋಬರ್ 16ರಂದು ಅಧಿಕಾರಕ್ಕೇರಿದ ಜತೆಗೆ ಈ ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸವೂ ತಲೆಯೆತ್ತಿದೆ. ಕಳೆದ 15 ದಿನಗಳಲ್ಲಿ ಕಣಿವೆ ರಾಜ್ಯದಲ್ಲಿ ಬಹುತೇಕ ದೈನಂದಿನ ಎನ್‌ಕೌಂಟರ್‌ಗಳು ನಡೆಯುತ್ತಿವೆ. ನವಂಬರ್ 2ರಂದು ಶ್ರೀನಗರದ ಖಾನ್ಯಾರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್ ಭಯೋತ್ಪಾದಕ ಉಸ್ಮಾನ್ ಲಷ್ಕರಿಯನ್ನು ಭದ್ರತಾಪಡೆ ಹೊಡೆದುರುಳಿಸಿತ್ತು. ಈತ ಪಾಕಿಸ್ತಾನಿ ಪ್ರಜೆಯಾಗಿದ್ದಾನೆ. ಪಾಕಿಸ್ತಾನದ ಕುಮ್ಮಕ್ಕಿನಿಂದಲೇ ಕಾಶ್ಮೀರದಲ್ಲಿ ಹೊಸ ಸರಕಾರ ಅಧಿಕಾರಕ್ಕೇರಿದ ಬಳಿಕ ಭಯೋತ್ಪಾದಕ ದಾಳಿ ಹೆಚ್ಚಾಗತೊಡಗಿದೆ.