ಜಮ್ಮು-ಕಾಶ್ಮೀರ ವಿಧಾನಸಭೆಗೆ ಮುಂದಿನ ತಿಂಗಳು ಚುನಾವಣೆ
ನವದೆಹಲಿ: ಕಳೆದ ಹಲವಾರು ವರ್ಷಗಳಿಂದ ಒಂದಲ್ಲ ಒಂದು ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಕಣಿವೆ ರಾಜ್ಯವಾದ ಜಮ್ಮು-ಕಾಶ್ಮೀರದಲ್ಲಿ ಮುಂದಿನ ತಿಂಗಳು ವಿಧಾನಸಭೆಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಜ್ಜಾಗಿದೆ.
ಪ್ರಾಯೋಗಿಕವಾಗಿ ಕೇಂದ್ರ ಚುನಾವಣಾ ಆಯೋಗದ ಪೂರ್ಣ ತಂಡ ಇಂದು ಜಮ್ಮು-ಕಾಶ್ಮೀರಕ್ಕೆ ಸಂದರ್ಶಿಸಿದ್ದು, ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಪರಿಶೀಲನೆ ನಡೆಸಿ ಬಳಿಕ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಸಭ ನಡೆಸಿದ ಚುನಾವಣಾ ದಿನಾಂಕ ನಿಗದಿಪಡಿಸಲಿದೆ.
ಜಮ್ಮು-ಕಾಶ್ಮೀರದ ವಿಧಾನಸಭೆಗೆ ಸೆಪ್ಟಂಬರ್ 30ರೊಳಗಾಗಿ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಈಗಾಗಲೇ ನಿರ್ದೇಶ ನೀಡಿದೆ. ಆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಭದ್ರತಾ ವ್ಯವಸ್ಥೆ ಕಾನೂನು ಮತ್ತು ಸುವ್ಯವಸ್ಥೆ ಕುರಿತಂತೆ ಹಲವು ಸುತ್ತಿನ ಸಭೆ ನಡೆಸಲು ಮುಂದಾಗಿದೆ.
ಮೂಲಗಳ ಪ್ರಕಾರ ಕಣಿವೆ ರಾಜ್ಯದಲ್ಲಿ ಒಟ್ಟು 5ರಿಂದ 6 ಹಂತಗಳಲ್ಲಾಗಿ ಚುನಾವಣೆ ನಡೆಯಲಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಸಕ್ರಿಯರಾಗಿ ಮತ ಚಲಾಯಿಸಿದ್ದರು. ಇದೇ ರೀತಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಇನ್ನಷ್ಟು ಸಕ್ರಿಯವಾಗಿ ಪಾಲ್ಗೊಳ್ಳುವರೆಂಬ ನಿರೀಕ್ಷೆಯನ್ನು ಚುನಾವಣಾ ಆಯೋಗ ವ್ಯಕ್ತಪಡಿಸಿದೆ.