ಜಿಲ್ಲೆಯಲ್ಲಿ ತೀವ್ರಗೊಂಡ ಹಳದಿ ಕಾಮಾಲೆ, ಜ್ವರ: ಜೈಲು ಅಧಿಕಾರಿ ಸೇರಿದಂತೆ ಸಾವಿನ ಸಂಖ್ಯೆ ಎರಡಕ್ಕೇರಿಕೆ
ಕಾಸರಗೋಡು: ಜಿಲ್ಲೆಯಲ್ಲಿ ಹಳದಿ ಕಾಮಾಲೆ ಕಾಯಿಲೆ ಹಾಗೂ ಜ್ವರ ದಿನೇ ದಿನೇ ತೀವ್ರಗೊಳ್ಳತೊಡಗಿದ್ದು, ಅದರ ಪರಿಣಾಮ ಸಾವಿನ ಸಂಖ್ಯೆ ಈಗ ಎರಡ ಕ್ಕೇರಿದೆ. ಕಣ್ಣೂರು ಮಹಿಳಾ ಬಂಧೀ ಖಾನೆಯ ಅಸಿಸ್ಟೆಂಟ್ ಸೂಪರಿಂ ಟೆಂಡೆಂಟ್ ಇ.ಕೆ. ಪ್ರಿಯಾ (51) ಜ್ವರಕ್ಕೆ ಬಲಿಯಾಗಿದ್ದಾರೆ. ಇವರು ಈ ಹಿಂದೆ ತಿರುವನಂತಪುರ ಮಹಿಳಾ ಜೈಲು ಮತ್ತು ಹೊಸದುರ್ಗದ ಜಿಲ್ಲಾ ಕಾರಾಗೃಹದಲ್ಲೂ ಸೇವೆ ಸಲ್ಲಿಸಿದ್ದರು.
ಅಬಕಾರಿ ಇಲಾಖೆಯ ನಿವೃತ್ತ ಅಧಿಕಾರಿ ತಳಿಪರಂಬ ರಾಜರಾಜೇಶ್ವರ ಕ್ಷೇತ್ರ ಬಳಿಯ ದಿ| ಇಳಿಯಿಡತ್ತ್ ಕೋಳಾಶ್ಶೇರಿ ಇಲ್ಲತ್ತ್ ಪರಮೇಶ್ವರನ್ ನಂಬೂದಿರಿ- ಸಾವಿತ್ರಿ ಅಂತರ್ಜನ ದಂಪತಿಯ ಪುತ್ರಿಯಾದ ಪ್ರಿಯಾ ನೀಲೇಶ್ವರ ಪಳ್ಳಿಕ್ಕೆರೆ ಮಾಡನ್ ಇಲ್ಲತ್ತ್ ನಾರಾಯಣನ್ ನಂಬೂದಿರಿಯವರ ಪತ್ನಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಪ್ರಿಯಾ ಅದಕ್ಕೆ ಚಿಕಿತ್ಸೆ ಪಡೆದಿದ್ದರು. ಜ್ವರ ಅಲ್ಪ ಶಮನಗೊಂಡಾಗ ಅವರು ಬುಧವಾರ ಕೆಲಸಕ್ಕೆ ಮತ್ತೆ ಸೇರ್ಪಡೆಗೊಂಡಿದ್ದರು. ಆ ವೇಳೆ ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಕಣ್ಣೂರಿನ ಆಸ್ಪತ್ರೆಗೂ ನಂತರ ನೀಲೇಶ್ವರ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು.
ಆದ್ದರಿಂದ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತಾ ದರೂ ಫಲಕಾರಿಯಾಗದೆ ನಿನ್ನೆ ಅಸುನೀಗಿದರು. ಮೃತರು ಪತಿಯ ಹೊರತಾಗಿ ಪುತ್ರ ಪ್ರಿಯೇಶ್, ಸಹೋದರ ಸಹೋದರಿಯರಾದ ಯಜ್ಞಶಂಕರನ್, ರಾಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಇನ್ನೊಂದೆಡೆ ಜಿಲ್ಲೆಯಲ್ಲಿ ಹಳದಿ ಕಾಮಾಲೆ ಕೂಡಾ ತೀವ್ರವಾಗಿ ಹರಡತೊಡಗಿದ್ದು, ಅದರ ಪರಿಣಾಮ ಹೊಸದುರ್ಗ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ವಿಭಾಗದ ಅಧ್ಯಾಪಕ ಬಂದಡ್ಕ ಕಕ್ಕಚ್ಚಾಲ್ ಕಟ್ಟಿಕೋಡಿ ನಿವಾಸಿ ಕೆ.ಎಂ. ಹೇಮಚಂದ್ರ ಮೊನ್ನೆ ಸಾವನ್ನಪ್ಪಿದ್ದರು.
ಹಳದಿ ಕಾಮಾಲೆ ಹಾಗೂ ಜ್ವರ ಜಿಲ್ಲೆಯ ಹಲವೆಡೆಗಳಲ್ಲಿ ಕಾಣಿಸಿಕೊಂ ಡಿದೆ. ಈಗಾಗಲೇ ನೂರಾರು ಮಂದಿ ಯನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಇನ್ನೊಂದೆಡೆ ಇಲಿಜ್ವರ, ಡೆಂಗ್ಯು, ಮಲೇರಿಯಾ ಕೂಡಾ ಜಿಲ್ಲೆಯ ಹಲವೆಡೆಗಳಲ್ಲಿ ಕಾಣಿಸಿಕೊಂಡಿದೆ. ಆದ್ದರಿಂದ ಈ ಬಗ್ಗೆ ಜನರು ತೀವ್ರ ಜಾಗ್ರತೆ ಪಾಲಿಸಬೇಕು. ಜ್ವರದ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಗೆ ಸಾಗಿ ಚಿಕಿತ್ಸೆ ಪಡೆಯಬೇಕೆಂದು ಜಿಲ್ಲಾ ಆರೋಗ್ಯ ವಿಭಾಗ ಮುನ್ನೆಚ್ಚರಿಕೆ ನೀಡಿದೆ.