ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಲಘು ಭೂಕಂಪನ: ಜನರಲ್ಲಿ ಆತಂಕ
ಕಾಸರಗೋಡು: ವೆಳ್ಳೇರಿಕುಂಡ್ ತಾಲೂಕಿನಲ್ಲಿ ಲಘು ಭೂಕಂಪನ ಅನುಭವಗೊಂಡಿದ್ದು, ಇದರಿಂದ ಜನರಲ್ಲಿ ಆತಂಕ ಸೃಷ್ಟಿಯಾಯಿತು. ಇಂದು ಮುಂಜಾನೆ 1.35 ರ ವೇಳೆ ಭೂಕಂಪನ ಅನುಭವಗೊಂಡಿದೆ. ಬಿರಿಕುಳಂ, ಕೋಟಮಜಲ್, ಪರಪ್ಪ, ಒಡಯಂ ಚಾಲ್, ಬಳಾಲ್ ಕೊಟ್ಟೋಡಿ ಪರಪ್ಪ, ಪಾಲಂಕಲ್ ಎಂಬೀ ಭಾಗಗಳಲ್ಲಿ ಭೂಕಂಪನ ಅನುಭವಗೊಂಡಿರುವುದಾಗಿ ತಿಳಿಸಲಾಗಿದೆ. ಈ ಪ್ರದೇಶಗಳಲ್ಲಿ ನಾಲ್ಕೈದು ಸೆಕೆಂಡುಗಳ ತನಕ ಅಸಾಮಾನ್ಯ ಶಬ್ದ ಕೇಳಿ ಬಂದಿರುವುದಾಗಿ ನಾಗರಿಕರು ತಿಳಿಸುತ್ತಿದ್ದಾರೆ. ಮಂಚ ಸಹಿತ ಪೀಠೋಪಕರಣಗಳು ಅಲುಗಾಡಿವೆ. ಪಡಿಯಾನ್‌ವಳಪ್ಪ್ ಎಂಬಲ್ಲಿ ಇದೇ ರೀತಿ ಅನುಭವಗೊಂ ಡಿದೆ. ಚುಳ್ಳಿಕೆರೆ ಕಾಂಞಿರತ್ತಡಿಯಲ್ಲಿ ಹಲವರು ಮನೆಯಿಂದ ಹೊರಗೆ ಓಡಿದ್ದಾರೆ. ಕೋಡೋಂ ಬೇಳೂರು, ವೆಸ್ಟ್ ಎಳೇರಿ, ಕಿನಾನೂರು- ಕರಿಂದಳ, ಬಳಾಲ್ ಪಂಚಾಯತ್‌ಗಳಲ್ಲಿ ಶಬ್ದ ಕೇಳಿ ಬಂದಿದೆ. ಸಾಕು ಪ್ರಾಣಿಗಳು ಅಸಹಜ ರೀತಿಯಲ್ಲಿ ವರ್ತಿಸಿವೆ ಎನ್ನಲಾಗಿದೆ. ಜನತೆ ಆತಂಕ ಪಡಬೇಕಾಗಿಲ್ಲವೆಂದು ತಹಶೀಲ್ದಾರ್ ಪಿ.ವಿ. ಮುರಳಿ ತಿಳಿಸಿದ್ದಾರೆ.