ಕಾಸರಗೋಡು: ಜಿಲ್ಲೆಯ ವಿವಿಧೆಡೆಗಳಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ.
ನಗರದ ಕರಂದಕ್ಕಾಡ್‌ನಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಗ್ರೇಡ್ ಶ್ರೀನಿವಾಸನ್ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಖಾಸಗಿ ಹಿತ್ತಿಲೊಂದರಲ್ಲಿ ಬಚ್ಚಿಡಲಾಗಿದ್ದ 180 ಎಂ.ಎಲ್‌ನ 37 ಪ್ಯಾಕೆಟ್ (6.66 ಲೀಟರ್) ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿದೆ.
ಇದೇತಂಡದ ಅಸಿ. ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಸಿಕೆವಿ ಸುರೇಶ್ ನೇತೃತ್ವದ ಅಬಕಾರಿ ತಂಡ ಕೂಡ್ಲು ವಿವೇಕಾನಂದ ನಗರದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಕೈವಶವಿರಿಸಿಕೊಂಡಿದ್ದ 10 ಲೀಟರ್ ಕೇರಳ ಮದ್ಯ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ವಿವೇಕಾನಂದ ನಗರದ ವಿಠಲ ಗಟ್ಟಿ ಎಂಬಾತನನ್ನು ಸೆರೆಹಿಡಿದು ಕೇಸು ದಾಖಲಿಸಲಾಗಿದೆ.
ಬದಿಯಡ್ಕ ಎಕ್ಸೈಸ್ ರೇಂಜ್ ಇನ್‌ಸ್ಪೆಕ್ಟರ್ ಜಿಷ್ಣು ಪಿ.ಆರ್ ಹಾಗೂ ಕೆಮು ಯೂನಿಟ್‌ನ ಅಸಿ. ಇನ್‌ಸ್ಪೆಕ್ಟರ್ (ಗ್ರೇಡ್) ಸಂತೋಷ್ ಕುಮಾರ್ ನೇತೃತ್ವದ ತಂಡ ಕುಂಟಾರಿನಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಕೆಎಸ್‌ಆರ್‌ಟಿಸಿ ಸ್‌ನಲ್ಲಿ ಸಾಗಿಸುತ್ತಿದ್ದ 3.24 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆದರೆ ಇದನ್ನು ಸಾಗಿಸಿದವರ ಬಗ್ಗೆ ಮಾಹಿತಿ ಲಭಿಸಿಲ್ಲವೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ ಕಾಸರಗೋಡು ರೇಂಜ್ ಎಕ್ಸೈಸ್ ಕಚೇರಿಯ ಅಸಿ. ಎಕ್ಸೈಸ್ ಇನ್‌ಸ್ಪೆಕ್ಟರ್ ವಿನೋದನ್ ಕೆ.ವಿ ನೇತೃತ್ವದ ತಂಡ ಚೆರ್ಕಳದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಖಾಸಗಿ ಹಿತ್ತಿಲಲ್ಲಿ ಬಚ್ಚಿಡಲಾಗಿದ್ದ 2.34 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ವೆಳ್ಳರಿಕುಂಡ್ ಒಡೆಯಂಚಾಲ್‌ನಲ್ಲಿ ಹೊಸದುರ್ಗ ಎಕ್ಸೈಸ್ ಸರ್ಕಲ್ ಕಚೇರಿ ಇನ್‌ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ೫೦೦ ಮಿಲ್ಲಿ ಲೀಟರ್ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಬೇಳೂರು ಮುತ್ತಾಡಿ ನಿವಾಸಿ ವಿಜಯನ್ ಸಿ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ.