ಜುಲೈ 6ರಿಂದ 9ರವರೆಗೆ ರಾಜ್ಯದಲ್ಲಿ ರೇಶನ್ ಅಂಗಡಿಗಳು ಮುಚ್ಚುಗಡೆ
ಕಾಸರಗೋಡು: ಈ ತಿಂಗಳ 6ರಿಂದ 9ರವರೆಗೆ ರಾಜ್ಯದಲ್ಲಿ ರೇಶನ್ ಅಂಗಡಿಗಳು ಮುಚ್ಚುಗಡೆಗೊಳ್ಳಲಿವೆ. ಎರಡು ರಜಾದಿನಗಳು ಅನಂತರ ಎರಡು ದಿನ ರೇಶನ್ ವ್ಯಾಪಾರಿಗಳ ಮುಷ್ಕರದಿಂದಾಗಿ ನಾಲ್ಕು ದಿನಗಳ ಕಾಲ ರಾಜ್ಯದ ರೇಶನ್ ಅಂಗಡಿಗಳು ಮುಚ್ಚುಗಡೆಗೊಳ್ಳಲಿವೆ. ಜೂನ್ ತಿಂಗಳ ಸಾಮಗ್ರಿ ವಿತರಣೆ 5ರಂದು ಕೊನೆಗೊಳ್ಳಲಿರುವುದರಿಂದ 6ರಂದು ಅಂಗಡಿಗಳಿಗೆ ರಜೆಯಾಗಿದೆ. 7ರಂದು ಆದಿತ್ಯವಾರ ಸಾರ್ವಜನಿಕ ರಜೆಯಾಗಿರುವುದು. 8 ಹಾಗೂ 9ರಂದು ಎಐಟಿಯುಸಿ ಸಹಿತ ನಾಲ್ಕು ಸಂಘಟನೆಗಳು ಒಳಗೊಂಡ ರೇಶನ್ ವ್ಯಾಪಾರಿ ಸಂಯುಕ್ತ ಮುಷ್ಕರ ಸಮಿತಿ ರೇಶನ್ ಅಂಗಡಿಗಳನ್ನು ಮುಚ್ಚುಗಡೆಗೊಳಿಸಿ ಚಳವಳಿ ನಡೆಸಲು ಕರೆ ನೀಡಿವೆ. ವೇತನ ಪ್ಯಾಕೇಜ್ ಪರಿಷ್ಕರಿಸಬೇಕೆಂದು ಒತ್ತಾಯಿಸಿ ರೇಶನ್ ವ್ಯಾಪಾರಿಗಳು 8 ಹಾಗೂ 9ರಂದು ರಾಜ್ಯಾದ್ಯಂತ ಅಂಗಡಿಗಳನ್ನು ಮುಚ್ಚುಗಡೆಗೊಳಿಸಿ ಮುಷ್ಕರ ನಡೆಯಲಿದೆ. ರೇಶನ್ ಡೀಲರ್ಸ್ ಕೋ-ಆರ್ಡಿನೇಶನ್ ರಾಜ್ಯ ಸಮಿತಿಯ ನೇತೃತ್ವದಲ್ಲಿ ಮುಷ್ಕರ ನಡೆಯಲಿದೆ. ರಾಜ್ಯದಲ್ಲಿ 14,300 ಚಿಲ್ಲರೆ ರೇಶನ್ ವ್ಯಾಪಾರಿಗಳು ಮುಷ್ಕರದಲ್ಲಿ ಭಾಗವಹಿಸುವರು. ಸರಕಾರ ಅನುಕೂಲ ನಿರ್ಧಾರ ಕೈಗೊಳ್ಳದಿದ್ದರೆ ಸೆಪ್ಟಂಬರ್‌ನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ.