ಜೈಲಿನಲ್ಲಿ ಖೈದಿಗಳ ಮಧ್ಯೆ ಘರ್ಷಣೆ: ಬೇಳ ನಿವಾಸಿಗೆ ಗಂಭೀರ: ಕೊಲೆಯತ್ನ ಪ್ರಕರಣ ದಾಖಲು
ಕಾಸರಗೋಡು: ಖೈದಿಗಳ ಮಧ್ಯೆ ಘರ್ಷಣೆ ಉಂಟಾಗಿ ಬೇಳ ಬಳಿಯ ನಿವಾಸಿಯಾದ ಓರ್ವ ಖೈದಿ ಗಂಭೀರ ಗಾಯಗೊಂಡ ಘಟನೆ ಹೊಸದುರ್ಗದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಅಬಕಾರಿ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ನಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಬೇಳ ಕಟ್ಟತ್ತಂಗಡಿ ಪೆರಿಯಡ್ಕ ನಿವಾಸಿ ಪಿ.ಎಸ್. ಮನು ಎಂಬಾತ ಘರ್ಷಣೆಯಲ್ಲಿ ಗಾಯಗೊಂ ಡಿದ್ದು, ಆತನನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈತನ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಇಂದು ತುರ್ತು ಶಸ್ತ್ರಚಿಕಿತ್ಸೆಗೊಳಪಡಿಸಲು ವೈದ್ಯರು ತೀರ್ಮಾನಿಸಿ ದ್ದಾರೆ. ಘಟನೆಗೆ ಸಂಬಂಧಿಸಿ ಜಿಲ್ಲಾ ಜೈಲು ಸುಪರಿಂಟೆಂಡೆಂಟ್ ವಿನೀತ್ ಎ ಪಿಳ್ಳೆ ನೀಡಿದ ದೂರಿನಂತೆ ಮೈಲಾಟಿ ಪೂವಞ್ಞಿಲ್ ಕೆ.ಕೆ. ನಿಲ ಯದ ಶರಣ್ ಎಂಬಾತನ ವಿರುದ್ಧ ಹೊಸದುರ್ಗ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿ ದ್ದಾರೆ.
ಆರೋಪಿ ಶರಣ್‌ನನ್ನು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈ ಹಿಂದೆ ಬಂಧಿಸಿದ ಬಳಿಕ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರಿಸ ಲಾಗಿತ್ತು. ಬದಿಯಡ್ಕ ಅಬಕಾರಿ ರೇಂಜ್ ಕಚೇರಿಯಲ್ಲಿ ದಾಖಲುಗೊಂಡ ಅಬಕಾರಿ ಪ್ರಕರಣವೊಂದಕ್ಕೆ ಸಂಬಂಧಿಸಿ ಮನುವನ್ನು ಬಂಧಿಸಿ ಇದೇ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ನಿನ್ನೆ ಯಾವುದೋ ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ಜೈಲಿನಲ್ಲಿ ಮನು ಮತ್ತು ಶರಣ್ ನಡುವೆ ವಾಗ್ವಾದ ನಡೆದಿದ್ದು, ಅದು ನಂತರ ಹೊಡೆದಾಟದಲ್ಲಿ ಪರ್ಯವಸಾನಗೊಂಡಿದೆ. ಆಗ ಶರಣ್ ಮನುವಿನ ತಲೆಯನ್ನು ಬಲವಾಗಿ ಗೋಡೆಗೆ ಬಡಿದನೆಂದೂ ಅದರಿಂದ ಗಂಭೀರ ಗಾಯಗೊಂಡ ಮನು ಅಲ್ಲೇ ಕುಸಿದು ಬಿದ್ದಿದ್ದಾನೆನ್ನಲಾಗಿದೆ. ಅದನ್ನು ಕಂಡ ಜೈಲು ಸಿಬ್ಬಂದಿಗಳು ತಕ್ಷಣ ಆತನನ್ನು ಮೊದಲು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸಾಗಿಸಿ, ನಂತರ ಅಲ್ಲಿಂದ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಶರಣ್‌ನನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.