ಜೈಲಿನಿಂದ ಬಿಡುಗಡೆಗೊಂಡ ತಕ್ಷಣ ಕಳವು: ಕುಖ್ಯಾತ ಆರೋಪಿ ಬಂಧನ

ಕಾಸರಗೋಡು: ಕಳವು ಪ್ರಕರಣ ದಲ್ಲಿ ಸೆರೆಗೀಡಾಗಿ ಜೈಲಿನಲ್ಲಿದ್ದು ಬಳಿಕ ಬಿಡುಗಡೆಗೊಂಡ ತಕ್ಷಣ ಮತ್ತೆ ಕಳವು ನಡೆಸಿದ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಕುಖ್ಯಾತ ಕಳವು ಆರೋಪಿ ತಳಿಪರಂಬ ನಡುವಿಲ್ ಪುಲಿಕುರುಂಬ ಎಂಬಲ್ಲಿನ ತೋರಪ್ಪನ್ ಸಂತೋಷ್ ಯಾನೆ ನೆಡುಮನ ಸಂತೋಷ್ (45) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಮಾನಂತವಾಡಿ ಡಿವೈಎಸ್‌ಪಿ ವಿ.ಕೆ. ವಿಶ್ವಂಭರನ್‌ರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ವಿ.ಜೆ. ಅಗಸ್ಟ್ಯನ್, ಎಸ್‌ಐ ಪಿ.ಡಿ. ರೋಯಿ ಚ್ಚನ್ ಎಂಬಿವರು ಸೇರಿ ತೋರಪ್ಪನ್ ಸಂತೋಷ್‌ನನ್ನು ಬಂಧಿಸಿದ್ದಾರೆ.

ಕುಖ್ಯಾತ ಕಳವು ಆರೋಪಿಯಾದ ತೋರಪ್ಪನ್ ಸಂತೋಷ್ ಎಪ್ರಿಲ್ 11ರಂದು ಕಾಞಂಗಾಡ್ ಜಿಲ್ಲಾ ಜೈಲ್‌ನಿಂದ ಬಿಡುಗಡೆಗೊಂಡಿದ್ದನು.  ಬಿಡುಗಡೆಗೊಂಡ ತಕ್ಷಣ ಕಳವು ನಡೆಸುವುದು ಈತನ ರೀತಿಯಾಗಿದೆ. ಆದ್ದರಿಂದ ಈತ ಬಿಡುಗಡೆಗೊಂಡ ಬಳಿಕ ಪೊಲೀಸರು ಜಾಗ್ರತೆ ವಹಿಸಿದ್ದಾರೆ. ಕಾಞಂಗಾಡ್‌ನಿಂದ ಕಣ್ಣೂರು ಪಯ್ಯಾವೂರಿಗೆ ತಲುಪಿದ ಸಂತೋಷ್ ಎಪ್ರಿಲ್ 15ರಂದು ಕಂಡಗಶ್ಶೇರಿಯ ಒಂದು ಹೋಟೆಲ್ ಹಾಗೂ ವರ್ಕ್‌ಶಾಪ್‌ನಿಂದ ಕಳವು ನಡೆಸಿದ್ದನು. ಆದರೆ ಅಲ್ಲಿಂದ ಹೆಚ್ಚೇನೂ ಮೊತ್ತ ಆತನಿಗೆ ಲಭಿಸಲಿಲ್ಲ. ಆದ್ದರಿಂದ ಹೋಟೆಲ್‌ನ ಎರಡು ಸಿಸಿಟಿವಿ ಕ್ಯಾಮರಾಗಳು, ಡಿವಿಆರ್ ಸಹಿತ ಸಾಮಗ್ರಿಗಳನ್ನು ಕಳವುಗೈದು ಆರೋಪಿ ಜಾಗ ಖಾಲಿ ಮಾಡಿದ್ದನು. ಎಪ್ರಿಲ್ 16ರಂದು ಪಯ್ಯಾವೂರು ವೆಂಬುವ ಜಂಕ್ಷನ್‌ನ ಪಿ.ಮಾರ್ಟ್‌ನ ಬೀಗ ಮುರಿದು ಮೂರೂ ವರೆ ಲಕ್ಷ ರೂಪಾಯಿ ಕಳವು ನಡೆಸಿದ್ದನು. ಫಾರೆನ್ಸಿಕ್ ತಜ್ಞರು ನಡೆಸಿದ ಪರಿಶೀಲನೆಯಲ್ಲಿ ಒಂದು ಬೆರಳಚ್ಚು ಪತ್ತೆಯಾಗಿತ್ತು. ಇದು ತೋರಪ್ಪನ್ ಸಂತೋಷ್‌ನದ್ದೇ ಆಗಿದೆ ಎಂದು ದೃಢೀಕರಿಸಲಾಯಿತು.

ಬಳಿಕ ಆರೋಪಿ ಯನ್ನು ಪತ್ತೆಹಚ್ಚಲು ಶೋಧ ಮುಂದು ವರಿಸುತ್ತಿದ್ದಂತೆ ಸಂತೋಷ್ ವಯನಾ ಡ್‌ಗೆ ಪರಾರಿಯಾದನು. ಈ ವಿಷಯ ತಿಳಿದು ಮಾನಂತವಾಡಿ ಪೊಲೀಸರು ಜಾಗ್ರತೆ ಪಾಲಿಸುತ್ತಿದ್ದಾಗ ಸಂತೋಷ್ ಮುಳಕುನ್ನು ಭಾಗಕ್ಕೆ ತಲುಪಿದ್ದು, ಕೂಡಲೇ ಆತನನ್ನು ಸೆರೆ ಹಿಡಿಯಲಾಗಿದೆ.

You cannot copy contents of this page