ಜೋಡುಕಲ್ಲಿನಲ್ಲಿ ಬೈಕ್‌ಗೆ ಥಾರ್ ಜೀಪು ಢಿಕ್ಕಿ: ಯುವಕ ಮೃತ್ಯು
ಉಪ್ಪಳ: ಪೈವಳಿಕೆ ಬಳಿ ಜೋಡುಕಲ್ಲಿನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟಿದ್ದಾನೆ. ಕರ್ನಾಟಕದ ಶಿವಮೊಗ್ಗ ನಿವಾಸಿಯೂ, ಉಪ್ಪಳ ಪ್ರತಾಪನಗರ ಪುಳಿಕುತ್ತಿಯಲ್ಲಿ ವಾಸಿಸುವ ಅಬ್ದುಲ್ ಗಫಾರ್ ಬಯಾಸಾಗಿ (35) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ 7 ಗಂಟೆ ವೇಳೆ ಅಬ್ದುಲ್ ಗಫಾರ್ ಬೈಕ್‌ನಲ್ಲಿ ಪೈವಳಿಕೆ ಭಾಗದಿಂದ ಕೈಕಂಬ ಭಾಗಕ್ಕೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಥಾರ್ ಜೀಪ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದರಿಂದ ಗಂಭೀರ ಗಾಯಗೊಂಡ ಅಬ್ದುಲ್ ಗಫಾರ್‌ರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಅಬ್ದುಲ್ ಗಫಾರ್ ಉಪ್ಪಳ ಭಾಗದಲ್ಲಿ ಟೈಲ್ಸ್ ಕೆಲಸ ನಿರ್ವಹಿಸುತ್ತಿದ್ದರೆಂದು ಹೇಳಲಾಗುತ್ತಿದೆ. ಘಟನೆ ಬಗ್ಗೆ ಸಂಬಂಧಿಕನಾದ ಉಪ್ಪಳ ಕೋಡಿಬೈಲ್‌ನ ಅಬ್ದುಲ್ ಮುನಾಫ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ಮೃತರು ಪತ್ನಿ ಸಾಜಿದ, ಮಕ್ಕಳಾದ ಯಾಸ್ಮಿನ್, ಮುಹಮ್ಮದ್ ಮುಬಾರಕ್, ಮುಹಮ್ಮದ್ ಫೈಜಾನ, ಸಹೋದರರಾದ ಅಬ್ದುಲ್ ರಹ್‌ಮಾನ್, ಮೆಹಬೂಬ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅಪಘಾತ ಸೃಷ್ಟಿಸಿದ ಜೀಪನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.