ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗಪೂಜೆ ಆರಂಭ
ವಾರಣಾಸಿ: ಉತ್ತರಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಇಂದು ಬೆಳಿಗ್ಗೆಯಿಂದ ಪೂಜಾ ಕ್ರಮಗಳು ಆರಂಭಗೊಂಡಿದೆ. ಮಸೀದಿ ಸಂಕೀರ್ಣದ ನೆಲಮಾಳಿಗೆ ಯಲ್ಲಿ ಪೂಜಿಸುವ ಹಕ್ಕನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯ ಹಿಂದೂಗಳಿಗೆ ನೀಡುವ ಮಹತ್ತರ ತೀರ್ಪುನ್ನು ನಿನ್ನೆ ನೀಡಿತ್ತು. ಈ ತೀರ್ಪು ಹೊರಬಂದ ಬೆನ್ನಲ್ಲೇ ಜ್ಞಾನವಾಪಿ ಮಸೀದಿ ಸಂಕೀರ್ಣದ ನೆಲಮಾಳಿಗೆಗೆ ನಿನ್ನೆಯಿಂದಲೇ ಹಿಂದೂ ಭಕ್ತರು ಹರಿದುಬರತೊಡಗಿದ್ದಾರೆ. ಭಕ್ತರ ಹರಿದುಬರುವಿಕೆ ಇಂದು ಬೆಳಿಗ್ಗಿನಿಂದ ಹೆಚ್ಚಾಗುತ್ತಾ ಸಾಗತೊಡಗಿದ್ದು ಅದರ ಜತೆಗೆ ಪೂಜೆಯೂ ಆರಂಭಗೊಂಡಿದೆ. ವಾರಣಾಸಿ ಮೆಜಿಸ್ಟ್ರೇಟ್ ಮತ್ತು ಶ್ರೀ ಕಾಶೀ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನಿಂದ ನಾಮನಿರ್ದೇಶಗೊಂಡ ಅರ್ಚಕರ ನೇತೃತ್ವದಲ್ಲಿ ಇಲ್ಲಿ ಪೂಜೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಮೆಜಿಸ್ಟ್ರೇಟ್ ಅವರನ್ನು ಇದರ ರಿಸೀವರ್ ಆಗಿ ವಾರಣಾಸಿ ಜಿಲ್ಲಾ ನ್ಯಾಯಾಲಯ ನೇಮಿಸಿದೆ. ನೆಲಮಾಳಿಗೆಯನ್ನು ಸುರಕ್ಷಿತವಾಗಿಡಲು ಮತ್ತು ಅದರಲ್ಲಿ ಯಾವುದೇ ರೀತಿಯ ಬದಲಾವಣೆಯ ಮಾಡದಂತೆಯೂ ನ್ಯಾಯಾಲಯ ನಿರ್ದೇಶ ನೀಡಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸಲಾಗುತ್ತಿದೆ. ಮಾತ್ರವಲ್ಲ ಜ್ಞಾನವಾಪಿ ಸಂಕೀರ್ಣದ ಸುತ್ತಲೂ ಬಿಗಿ ಭದ್ರತೆ ಏರ್ಪಡಿಸಲಾಗಿದೆಯೆಂದು ವಾರಣಾಸಿ ಹೆಚ್ಚುವರಿ ಮೆಜಿಸ್ಟ್ರೇಟ್ ಪ್ರಕಾಶ್ಚಂದ್ರ ತಿಳಿಸಿದ್ದಾರೆ. ನೆಲಮಾಳಿಗೆಯ ನಿಯಂತ್ರಣವನ್ನು ರಿಸೀವರ್ ಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.