ಟ್ರಾವೆಲ್ ಏಜೆನ್ಸಿಗಳಿಗೆ ಪಂಗನಾಮ ಹಾಕಿ ೩೦ ಲಕ್ಷ ರೂ. ಎಗರಿಸಿದ ಪ್ರಕರಣ: ಯುವಕ ಸೆರೆ
ಕಾಸರಗೋಡು: ಟ್ರಾವೆಲ್ ಏಜೆನ್ಸಿಗಳಿಗೆ ಪಂಗನಾಮ ಹಾಕಿ ೩೦ ಲಕ್ಷ ರೂ. ಕಬಳಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ತೃಶೂರು ನಿವಾಸಿ ಹಾಗೂ ಈಗ ತಮಿಳುನಾಡಿನ ಡಿಂಡಿಕ್ಕಲ್‌ನಲ್ಲಿ ವಾಸಿಸುತ್ತಿರುವ ಕಾರ್ತಿಕ್ ಪಂಕಜಾಕ್ಷನ್ (೩೦) ಬಂಧಿತನಾದ ಆರೋಪಿಯಾಗಿದ್ದಾನೆ. ಕಣ್ಣೂರು ಟೌನ್ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಎ. ಬಿನು ಮೋಹನನ್‌ರ ನೇತೃತ್ವದ ಪೊಲೀಸರು ಈತನನ್ನು ತೃಶೂರಿನಿಂದ ಬಂಧಿಸಿದ್ದಾರೆ.
ಕಾಸರಗೋಡು, ಪಯ್ಯನ್ನೂರು, ಕಣ್ಣೂರು, ಕಲ್ಲಿಕೋಟೆ, ಎರ್ನಾಕುಳಂ ಮತ್ತು ಮಧುರೈ ಎಂಬೆಡೆಗಳ ಹಲವು ಟ್ರಾವೆಲ್ಸ್ ಏಜೆನ್ಸಿಗಳನ್ನು ವಂಚಿಸಿ ಆರೋಪಿ ೩೦ ಲಕ್ಷ ರೂ. ಎಗರಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಗಲ್ಫ್ ರಾಷ್ಟ್ರಗಳು, ಅಮೆರಿಕಾ, ಕೆನಡಾಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ವಿಮಾನ ಟಿಕೆಟ್‌ನ್ನು ಮುಂಗಡ ಬುಕ್ಕಿಂಗ್ ನಡೆಸುವ ಹೆಸರಲ್ಲಿ ಟ್ರಾವೆಲ್ಸ್ ಏಜೆನ್ಸಿಗಳಿಗೆ ಕರೆ ಮಾಡಿ ವಿಮಾನ ಟಿಕೆಟ್‌ನ ದರವನ್ನು ಮುಂಗಡವಾಗಿ ಕೇಳಿ ಪಡೆದು ಬಳಿಕ ವಂಚನೆಗೈಯ್ಯುತ್ತಿರುವುದು ಆರೋಪಿಯ ವಂಚನೆ ರೀತಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಂತೆ ಆರೋಪಿ ಕಣ್ಣೂರು ಕಲೆಕ್ಟರೇಟ್ ಬಳಿಯ ಟ್ರಾವೆಲ್ ಏಜೆನ್ಸಿಯೊಂದರಿಂದ ವಿಮಾನ ಟಿಕೆಟ್ ಮುಂಗಡ ಬುಕ್ಕಿಂಗ್‌ನ ಹೆಸರಲ್ಲಿ ಐದು ಲಕ್ಷ ರೂ. ಪಡೆದು ವಂಚಿಸಿದ್ದನೆಂಬ ದೂರಿನಂತೆ ಕಣ್ಣೂರು ಪೊಲೀಸರು ಆರೋಪಿ ವಿರುದ್ಧ ಮೊದಲು ಪ್ರಕರಣ ದಾಖಲಿಸಿಕೊಂಡಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ಬಳಿಕ ಕಾಸರಗೋಡು ಸೇರಿದಂತೆ ಇತರ ಹಲವು ಟ್ರಾವೆಲ್ ಏಜೆನ್ಸಿಗಳ ದೂರುಗಳೂ ವಿವಿಧ ಪೊಲೀಸ್ ಠಾಣೆಗಳಿಗೆ ಬಂದು ಸೇರತೊಡಗಿವೆ. ಆ ಬಗ್ಗೆಯೂ ಸಂಬಂಧಪಟ್ಟ ಪೊಲೀಸ್ ಠಾಣೆಗಳ ಪೊಲೀಸರು ಇನ್ನೊಂದೆಡೆ ತನಿಖೆ ಆರಂಭಿಸಿದ್ದಾರೆ.