ಟ್ರೋಲಿಂಗ್ ನಿಷೇಧಕ್ಕೆ ನಾಳೆ ರಾತ್ರಿ ತೆರೆ
ಕಾಸರಗೋಡು: ಮಳೆಗಾಲ ಮೀನುಗಳ ಸಂತಾನೋತ್ಪತ್ತಿಯ ಋತುವಾಗಿದ್ದು, ಅದರಿಂದಾಗಿ ಮತ್ಸ್ಯ ಸಂಪತ್ತನ್ನು ಸಂರಕ್ಷಿಸಿ ಅದನ್ನು ಹೆಚ್ಚಿಸುವ ಸಲುವಾಗಿ ಈ ಋತುವಿನಲ್ಲಿ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ನಿಷೇಧ ಹೇರುವ ಕ್ರಮದಂತೆ ಈ ವರ್ಷ ಜ್ಯಾರಿಗೊಳಿಸಲಾಗಿರುವ ಟ್ರೋಲಿಂಗ್ ನಿಷೇಧದ ಅವಧಿ ನಾಳೆ ರಾತ್ರಿ 12 ಗಂಟೆಗೆ ಕೊನೆಗೊಳ್ಳಲಿದೆ. 52 ದಿನಗಳ ತನಕ ಪ್ರತೀ ವರ್ಷ ಟ್ರೋಲಿಂಗ್ ನಿಷೇಧ ಹೇರಲಾಗುತ್ತಿದೆ.ಇದರಂತೆ ಈ ವರ್ಷ ಜೂನ್ ೯ರಿಂದ ರಾಜ್ಯದ ಆಳ ಸಮುದ್ರದಲ್ಲಿ ಟ್ರೋಲಿಂಗ್ ನಿಷೇಧ ಜ್ಯಾರಿಗೊಳಿಸಲಾಗಿತ್ತು.
ಮಂಜೇಶ್ವರ, ಕಾಸರಗೋಡು ಕಸಬಾ ಮತ್ತು ಚೆರ್ವತ್ತೂರು ಮಡಕ್ಕರ ಮೀನುಗಾರಿಕಾ ಬಂದರುಗಳಲ್ಲಾಗಿ ಜಿಲ್ಲೆಯಲ್ಲಿ 150ರಷ್ಟು ಬೋಟ್‌ಗಳಲ್ಲಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದೆ. ನಿಷೇಧದಿಂದಾಗಿ ಈ ಬೋಟ್‌ಗಳೆಲ್ಲಾ ಕಳೆದ 52 ದಿನಗಳಿಂದ ಸಮುದ್ರಕ್ಕಿಳಿಯದೆ ದಡದಲ್ಲೇ ಉಳಿದುಕೊಂಡಿದೆ. ಟ್ರೋಲಿಂಗ್ ನಿಷೇಧದ ಅವಧಿಯಲ್ಲಿ ಎಲ್ಲಾ ಬೋಟ್‌ಗಳ ದುರಸ್ತ್ತಿ ಕೆಲಸಗಳನ್ನು ನಡೆಸಿ ಮೀನುಗಾರಿಕೆಗೆ ಅದನ್ನು ಮತ್ತೆ ಸಜ್ಜುಗೊಳಿಸಲಾಗುತ್ತಿದೆ. ಹೀಗೆ ದಡಸೇರಿರುವ ಬೋಟ್‌ಗಳ ಬೆಸ್ತರು ಭಾರೀ ಮತ್ಸ್ಯ ಸಂಪತ್ತು ಲಭಿಸುವ ತುಂಬು ನಿರೀಕ್ಷೆಯೊಂದಿಗೆ ನಾಳೆ ತಡರಾತ್ರಿಯಿಂದ ಆಳ ಸಮುದ್ರದಲ್ಲಿ ಮತ್ತೆ ಮೀನುಗಾರಿಕೆಗೆ ತೊಡಗಲಿದ್ದಾರೆ.
ಜಿಲ್ಲೆಯಲ್ಲಿ ಸಹಸ್ರಾರು ಬೆಸ್ತ ಕುಟುಂಬದವರು ಮೀನುಗಾರಿಕೆ ಯನ್ನು ಮಾತ್ರವೇ ತಮ್ಮ ಏಕೈಕ ಉಪಜೀವನ ಮಾರ್ಗವನ್ನಾಗಿಸಿ ಜೀವಿಸುವವರಿ ದ್ದಾರೆ. ಟ್ರೋಲಿಂಗ್ ನಿಷೇಧದ ಅವಧಿಯಲ್ಲಿ ಇವರೆಲ್ಲ ಕೆಲಸವಿಲ್ಲದೆ ಇತರ ಉಪಜೀವನ ಮಾರ್ಗ ಅವಲಂಬಿಸಬೇಕಾಗಿ ಬರುತ್ತಿದೆ. ಇವರೆಲ್ಲ ನಾಳೆ ರಾತ್ರಿಯಿಂದ ಅತ್ಯುತ್ಸಾಹದೊಂದಿಗೆ ಮತ್ತೆ ಮೀನುಗಾರಿಕೆಗೆ ಇಳಿಯಲಿದ್ದಾರೆ.
ನಾಡ ದೋಣಿಗಳಲ್ಲಿ ಸಮುದ್ರ ತೀರ ಪ್ರದೇಶಗಳಲ್ಲಿ ಪರಂಪರಾಗ ತವಾದ ರೀತಿಯಲ್ಲಿ ಮೀನುಗಾರಿಕೆ ನಡೆಸುವವರಿಗೆ ಟ್ರೋಲಿಂಗ್ ನಿಷೇಧ ವನ್ನು ಅನ್ವಯಗೊಳಿಸಲಾಗುವುದಿಲ್ಲ.