ಠೇವಣಿ ಮೊತ್ತ ಮರಳಿ ಲಭಿಸಿಲ್ಲ: ವ್ಯಾಪಾರಿ ಸಹಕಾರಿ ಸಂಸ್ಥೆ ಮುಂದೆ ನೇಣು
ಇಡುಕ್ಕಿ: ಸಹಕಾರಿ ಸಂಸ್ಥೆಗಳಲ್ಲಿ ಠೇವಣಿಯಿರಿಸಿದ ಮೊತ್ತ ಮರಳಿ ಲಭಿಸದ ಹಿನ್ನೆಲೆಯಲ್ಲಿ ವ್ಯಾಪಾರಿ ಸಹಕಾರಿ ಸಂಸ್ಥೆ ಮುಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಟ್ಟಪ್ಪನ ಮುರಿಂಙಶೇರಿಯ ಸಾಬು (56) ಸಾವಿಗೀಡಾದ ವ್ಯಕ್ತಿ. ಇವರು ಕಟ್ಟಪ್ಪನ ರೂರಲ್ ಡೆವಲಪ್‌ಮೆಂಟ್ ಕೋ-ಆಪರೇಟಿವ್ ಸೊಸೈಟಿ ಮುಂದೆ ಆತ್ಮ ಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾಬು ಕಟ್ಟಪ್ಪನ ಪೇಟೆಯಲ್ಲಿ ವ್ಯಾಪಾರ ಸಂಸ್ಥೆ ಹಾಗೂ ಹೋಂ ಸ್ಟೇ ನಡೆಸುತ್ತಿದ್ದರು. ತಿಂಗಳ ಹಿಂದೆ ಅವರು ತಾನು ಠೇವಣಿಯಿರಿಸಿದ ಮೊತ್ತ ಮರಳಿ ಕೊಡಬೇಕೆಂದು ಸೊಸೈಟಿ ಅಧಿಕಾರಿಗಳಲ್ಲಿ ಆಗ್ರಹಿಸಿದ್ದರು. ಆದರೆ ಆರ್ಥಿಕ ಸಂದಿಗ್ಧತೆಯಿಂದ ಮೊತ್ತ ನೀಡಿಲ್ಲವೆನ್ನಲಾಗಿದೆ. ಇದರಿಂದ ಆಡಳಿತ ಸಮಿತಿಯೊಂದಿಗೆ ನಡೆಸಿದ ಚರ್ಚೆ ವೇಳೆ ಠೇವಣಿ ಗಡುಗಳಾಗಿ ಪ್ರತಿ ತಿಂಗಳು ನೀಡುವುದಾಗಿ ಒಪ್ಪಂದ ಉಂಟಾಗಿತ್ತು.
ನಿನ್ನೆ ಸೊಸೈಟಿಗೆ ತಲುಪಿದ ಸಾಬು ಪತ್ನಿಗೆ ಅಸೌಖ್ಯವೆಂದೂ ಇದರಿಂದ ಹೆಚ್ಚು ಮೊತ್ತ ಬೇಕೆಂದು ತಿಳಿಸಿದರೂ ಹಣ ನೀಡಲು ಅಧಿಕಾರಿಗಳು ಸಿದ್ಧರಾಗಿಲ್ಲ. ಅಲ್ಲದೆ ಸಾಬುರನ್ನು ನಿಂದಿಸಿರುವುದಾಗಿಯೂ ಹೇಳಲಾಗುತ್ತಿದೆ. ಇದರಿಂದ ಮನನೊಂದು ಸೊಸೈಟಿಯಿಂದ ಮರಳಿದ ಸಾಬು ಇಂದು ಬೆಳಿಗ್ಗೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ. ಆತ್ಮಹತ್ಯೆ ಕುರಿತು ಬರೆದಿಟ್ಟ ಪತ್ರವೂ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.