ಡಾ. ಮನಮೋಹನ್ ಸಿಂಗ್ ನಿಧನ: ಏಳು ದಿನ ರಾಷ್ಟ್ರೀಯ ಶೋಕಾಚರಣೆ
ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ (92) ಅವರ ನಿಧನಕ್ಕೆ ಗೌರವ ಸಂಕೇತವಾಗಿ ಕೇಂದ್ರ ಸರಕಾರ ಇಂದಿನಿಂದ ಜನವರಿ ೧ರ ತನಕ ಏಳು ದಿನ ರಾಷ್ಟ್ರೀ ಯ ಶೋಕಾಚರಣೆ ಘೋಷಿಸಿದೆ. ಇದರಂತೆ ಈ ಏಳು ದಿನಗಳ ಎಲ್ಲಾ ಸರಕಾರಿ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಕೇಂದ್ರ ಸಚಿವ ಸಂಪುಟದ ತುರ್ತು ಸಭೆಯನ್ನು ಇಂದು ಬೆಳಿಗ್ಗೆ ಕರೆಯಲಾಗಿದೆ. ಇದರ ಹೊರತಾಗಿ ದೇಶದ ಎಲ್ಲಾ ರಾಜ್ಯಗಳಲ್ಲೂ ಇಂದು ಶೋಕಾಚರಿಸಲಾ ಗುತ್ತಿದೆ. ಡಾ. ಮನಮೋಹನ್‌ಸಿಂಗ್ ರ ಅಂತ್ಯಕ್ರಿಯೆ ನಾಳೆ ನಡೆಸಲಾಗು ವುದೆಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ. ಆ ಕುರಿತಾದ ಪೂರ್ಣ ಮಾಹಿತಿಯನ್ನು ಇಂದು ನೀಡಲಾಗುವುದೆಂದೂ ಅವರು ತಿಳಿಸಿದ್ದಾರೆ. ಮನಮೋಹನ್ ಸಿಂಗ್‌ರ ಪಾರ್ಥೀವ ಶರೀರವನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಯಿಂದ ದೆಹಲಿಯ ಮೋತಿಲಾಲ್ ನೆಹರೂ ಮಾರ್ಗದಲ್ಲಿರುವ ಅವರ ನಿವಾಸಕ್ಕೆ ತಲುಪಿಸಲಾಗಿದ್ದು, ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರಮೋದಿ ಸೇರಿದಂತೆ ದೇಶ ಹಾಗೂ ವಿದೇಶದ ಹಲವು ಗಣ್ಯರು ಅಂತಿಮ ದರ್ಶನ ನಡೆಸಲಿದ್ದಾರೆ. ಏಳು ದಿನಗಳ ಶೋಕಾ ಚರಣೆಯಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕಿಳಿಸಲಾಗುವುದೆಂದು ಗೃಹ ಸಚಿವಾಲಯ ತಿಳಿಸಿದೆ.
ವಿದೇಶದಲ್ಲಿರುವ ಎಲ್ಲಾ ಭಾರತೀಯ ರಾಯಭಾರಿ ಕಚೇರಿಗಳು ಮತ್ತು ಹೈಕಮಿಶನ್‌ಗಳಲ್ಲಿ ಅಂತ್ಯಕ್ರಿಯೆ ದಿನದಂದು ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗುವುದೆಂದು ಗೃಹ ಸಚಿವರು ಹೇಳಿದ್ದಾರೆ. 2004ರಿಂದ 2014ರ ವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಅಡಿಯಲ್ಲಿ ಸಮ್ಮಿಶ್ರ ಸರಕಾರವನ್ನು ಮುನ್ನಡೆಸುವ ಮೂಲಕ ಸತತ ಎರಡು ಬಾರಿ ಪ್ರಧಾನಮಂತ್ರಿಯಾಗಿ ಡಾ. ಮನಮೋಹನ್ ಸಿಂಗ್‌ರ ಸೇವೆ ಸಲ್ಲಿಸಿದ್ದರು. ಅವರ ಆರೋಗ್ಯ ನಿನ್ನೆ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಅದು ಫಲಕಾರಿಯಾಗದೆ ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ತಿಂಗಳಿಂದ ಚಿಕಿತ್ಸೆಯಲ್ಲಿದ್ದರು.