‘ಡಿಜಿಟಲ್ ಅರೆಸ್ಟ್’ ವಂಚನೆ : ತನಿಖೆಗೆ ಉನ್ನತ ಮಟ್ಟದ ಸಮಿತಿ
ಕಾಸರಗೋಡು: ‘ಡಿಜಿಟಲ್ ಅರೆಸ್ಟ್’ಗೆ ಸಂಬಂಧಿಸಿದ ಸೈಬರ್ ವಂಚನೆ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳ ತನಿಖೆಗಾಗಿ ಕೇಂದ್ರ ಗೃಹ ಸಚಿವಾಲಯ ಉನ್ನತ ಮಟ್ಟದ ಸಮಿತಿ ರಚಿಸಿದೆ. ಈ ಸಮಿತಿ ಸಚಿವಾಲಯದ ಆಂತರಿಕ ಭದ್ರತಾ ಕಾರ್ಯದರ್ಶಿಯವರ ಮೇಲ್ವಿಚಾರಣೆ ಯಲ್ಲಿ ಕಾರ್ಯವೆಸಗಲಿದೆ.
‘ಡಿಜಿಟಲ್ ಅರೆಸ್ಟ್’ ಎಂಬುವುದು ಸೈಬರ್ ವಂಚನೆಯ ಒಂದು ಹೊಸ ವಿಧಾನವಾಗಿದೆ. ಇದರಲ್ಲಿ ವಂಚಕರು ಕಾನೂನು ಜ್ಯಾರಿ ಅಧಿಕಾರಿಗಳಂತೆ ವರ್ತಿಸಿ ಫೋನ್ ಮಾಡುತ್ತಾರೆ ಮತ್ತು ಆಡಿಯೋ ಅಥವಾ ವೀಡಿಯೋ ಕರೆಗಳ ಮೂಲಕ ಜನರನ್ನು ಬೆದರಿಸುತ್ತಾರೆ. ಬಂಧನದ ಸುಳ್ಳು ನೆಪದಲ್ಲಿ ಡಿಜಿಟಲ್ ಅರೆಸ್ಟ್ ತೋರಿಸಿ ಹಣ ಲಪಟಾಯಿಸುವುದು ಈ ಡಿಜಿಟಲ್ ಅರೆಸ್ಟ್‌ನ ರೀತಿಯಾಗಿದೆ.
ದೇಶಾದ್ಯಂತ ಡಿಜಿಟಲ್ ಅರೆಸ್ಟ್ ಪ್ರಕರಣಗಳ ಸಂಖ್ಯೆಯಲ್ಲಿ ಹಠಾತ್ ಹೆಚ್ಚಳ ಉಂಟಾಗಿದ್ದು, ಆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂತಹ ಹಗರಣಗಳ ವಿರುದ್ಧ ಜನರಿಗೆ ಮುನ್ನೆಚ್ಚರಿಕೆಯನ್ನೂ ನೀಡಿದ್ದಾರೆ. ಭಾರತೀಯ ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ಎಂಬುವುದೇನೂ ಇಲ್ಲ. ಇದು ವಂಚಕರು ಆರ್ಥಿಕ ಲಪಟಾವಣೆಗಾಗಿ ಆರಂಭಿಸುವ ಒಂದು ಹೊಸ ವಂಚನಾ ವಿಧಾನವಾಗಿದೆ.
ಈ ವರ್ಷ ಈ ತನಕ 6000ಕ್ಕೂ ಹೆಚ್ಚು ಡಿಜಿಟಲ್ ಅರೆಸ್ಟ್ ದೂರುಗಳು ದಾಖಲುಗೊಂಡಿವೆ. ಅದಕ್ಕೆ ಸಂಬಂಧಿಸಿ ೬ ಲಕ್ಷ ಮೊಬೈಲ್ ಫೋನ್ ನಂಬ್ರಗಳನ್ನು ನಿರ್ಬಂಧಿಸಲಾಗಿದೆ. ಸೈಬರ್ ಅಪರಾಧ ಸಮನ್ವಯ ಕೇಂದ್ರವು ಕನಿಷ್ಠ 706 ಮೊಬೈಲ್ ಅಪ್ಲಿಕೇಷನ್‌ನನ್ನು ನಿರ್ಬಂಧಿಸಿದೆ. ಸೈಬರ್ ವಂಚನೆಗೆ ಸಂಬಂಧಿಸಿ 3.25 ಲಕ್ಷದಷ್ಟು ನಕಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳಲಾಗಿದೆ.
ಕೇಂದ್ರ ಗೃಹ ಸಚಿವಾಲಯ ನೂತನವಾಗಿ ರಚಿಸಿರುವ ಸಮಿತಿ ಎಲ್ಲಾ ಹಗರಣಗಳ ಬಗ್ಗೆ ತನಿಖೆ ನಡೆಸಲಿದೆ. ಸಚಿವಾಲಯದ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು ‘14-ಎ’ ಎಂದು ಕರೆಯಲಾಗುತ್ತಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಠಾಣೆಗಳನ್ನು ಈ ಸಮಿತಿ ಈಗಾಗಲೇ ಸಂಪರ್ಕಿಸಿದ್ದು, ಇಂತಹ ವಂಚನೆ ಕುರಿತಾದ ಪೂರ್ಣ ಮಾಹಿತಿಗಳನ್ನು ನೀಡುವಂತೆ ನಿರ್ದೇಶ ನೀಡಿದೆ. ಮಾತ್ರವಲ್ಲ ತಪ್ಪಿತಸ್ಥರ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆಯೂ ನಿರ್ದೇಶ ನೀಡಿದೆ.