ತಮಿಳುನಾಡಿನಲ್ಲಿ ನಕಲಿ ಮದ್ಯ ಸೇವನೆ: ಸಾವಿನ ಸಂಖ್ಯೆ 35ಕ್ಕೇರಿಕೆ

ಚೆನ್ನೈ: ತಮಿಳುನಾಡು ಕಳ್ಳಕುರಿಚ್ಚಿ ಜಿಲ್ಲೆಯ ಕರುಣಾಪುರಂ ಕಾಲನಿಯಲ್ಲಿ ಕಳ್ಳಭಟ್ಟಿ ಸಾರಾಯಿ ಸೇವಿಸಿ ಮಡಿದವರ ಸಂಖ್ಯೆ 35ಕ್ಕೇರಿದೆ. 70ಕ್ಕೂ ಹೆಚ್ಚು ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಾಗಿ ದಾಖಲಿಸಲಾಗಿದ್ದು, ಆ ಪೈಕಿ ಹಲವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಪ್ಪಿತಸ್ಥರು ಮತ್ತು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಕನ್ನುಕುಟ್ಟಿ (46) ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ ಸುಮಾರು 200 ಲೀಟರ್ ಕಳ್ಳಬಟ್ಟಿ ಸಾರಾಯಿಯನ್ನು ವಶಪಡಿಸಲಾಗಿದೆ. ಇದರಲ್ಲಿ ಮಾರಣಾಂತಿಕ ಮೆಥನಾಲ್ ಬೆರೆಸಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದುರಂತಕ್ಕೆ ಸಂಬಂಧಿಸಿ ಕಳ್ಳಕುರುಚ್ಚಿ ಜಿಲ್ಲಾಧಿಕಾರಿ ಶ್ರವಣ್ ಕುಮಾರ್ ಜಟಾವತ್‌ರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಮಾತ್ರವಲ್ಲ ಕಳ್ಳಕುರಿಚ್ಚಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮಮ್ ಸಿಂಗ್ ಮೀನಾ ಸೇರಿ ಒಟ್ಟು 10 ಅಧಿಕಾರಿಗಳನ್ನು ಸರಕಾರ ಅಮಾನತುಗೊಳಿಸಿದೆ. ಈ ಪ್ರಕರಣದ ತನಿಖೆಯನ್ನು ಸಿಬಿ-ಸಿಐಡಿಗೆ ವಹಿಸಿಕೊಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page