ತಲಪಾಡಿ- ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ 10 ತಿಂಗಳಲ್ಲಿ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದು 15 ಮಂದಿ
ಮಂಜೇಶ್ವರ: ತಲಪಾಡಿಯಿಂದ ಆರಂಭಗೊಂಡು ಕುಂಬಳೆ ತನಕದ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಕಳೆದ 10 ತಿಂಗಳಲ್ಲಿ ಉಂಟಾದ ವಾಹನ ಅಪಘಾತಗಳಲ್ಲಾಗಿ 15 ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.
ಉಪ್ಪಳ ಗೇಟ್‌ನಲ್ಲಿ ಕಳೆದ ಐದು ತಿಂಗಳಲ್ಲಿ ವಿವಿಧ ವಾಹನ ಅಪಘಾತಗಳಲ್ಲಾಗಿ ಐದು ಮಂದಿ ಸಾವನ್ನಪ್ಪಿದ್ದಾರೆ. ಒಂದೂವರೆ ತಿಂಗಳ ಹಿಂದೆ ಮಂಜೇಶ್ವರದಲ್ಲಿ ಬಸ್ ಮತ್ತು ಕಾರು ಢಿಕ್ಕಿ ಹೊಡೆದು ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದನು. ಮೂರು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣದ ಸಲುವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕ್ರೈನ್‌ಗೆ ಟೆಂಪೋವೊಂದು ಢಿಕ್ಕಿ ಹೊಡೆದು ಅದರ ಚಾಲಕ ಸಾವನ್ನಪ್ಪಿದ್ದಾರೆ.
ಶಿರಿಯದಲ್ಲಿ ನಾಲ್ಕು ತಿಂಗಳ ಹಿಂದೆ ಲಾರಿ ಮತ್ತು ಬೈಕ್ ಢಿಕ್ಕಿ ಹೊಡೆದು ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆಯೂ ನಡೆದಿದೆ. ಹತ್ತು ತಿಂಗಳ ಹಿಂದೆ ಬೈಕ್ ಮತ್ತು ಲಾರಿ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಪ್ರಯಾಣಿಕರಾದ ಮೀನು ಮಾರಾಟ ಕಾರ್ಮಿಕನೋರ್ವರೂ ದಾರುಣವಾಗಿ ಸಾವನ್ನಪ್ಪಿದ್ದರು. ಇದು ಮಾತ್ರವಲ್ಲದೆ, ಆಂಬುಲೆನ್ಸ್ ಮತ್ತು ಕಾರು ಢಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ದಾರುಣ ಘಟನೆಯೂ ಇದೇ ಅವಧಿಯಲ್ಲಿ ನಡೆದಿದೆ. ಮಂಗಲ್ಪಾಡಿ ಮಟ್ಟಂ ಕುಕ್ಕಾರಿನಲ್ಲಿ ಉಂಟಾದ ಬೈಕ್ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಏಳು ತಿಂಗಳ ಹಿಂದೆ ನಡೆದಿದೆ. ಆರು ತಿಂಗಳ ಹಿಂತೆ ಕುಂಜತ್ತೂರಿನಲ್ಲಿ ಟೆಂಪೋ ಢಿಕ್ಕಿ ಹೊಡೆದು ಕುಂಜತ್ತೂರಿನ ವ್ಯಾಪಾರಿಯೋರ್ವರು ದಾರುಣವಾಗಿ ಸಾವನ್ನಪ್ಪಿದ ಘಟನೆಯಲ್ಲಿ ನಡೆದಿದೆ. ಕಳೆದ ತಿಂಗಳ 19ಕ್ಕೆ ಕುಂಬಳೆ ಸೇತುವೆ ಬಳಿ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೊಳಗಾಗಿ ೧೨ರಷ್ಟು ಮಂದಿ ಗಾಯಗೊಂಡಿದ್ದರು. ಇದು ಕಳೆದ ಹತ್ತು ತಿಂಗಳಲ್ಲಿ ತಲಪಾಡಿಯಿಂದ ಕುಂಬಳೆ ತನಕದ ರಾಷ್ಟ್ರೀಯ ಹೆದ್ದಾರಿ ನಡುವೆ ವಾಹನ ಅಪಘಾತಗಳ ಲೆಕ್ಕಾಚಾರಗಳು ಮಾತ್ರವೇ ಆಗಿದೆ. ಜಿಲ್ಲೆಯ ಇತರೆಡೆಗಳಲ್ಲಿ ಈ ಅವಧಿಯಲ್ಲಿ ನಡೆದ ಅಪಘಾತ, ಸಾವು ಮತ್ತು ಗಾಯಗೊಂಡವರ ಸಂಖ್ಯೆ ಬೇರೆಯೇ ಇದೆ.
ವಾಹನಗಳ ಅಮಿತ ವೇಗ, ಅಜಾಗ್ರತೆ, ಟ್ರಾಫಿಕ್ ಕಾನೂನು ಉಲ್ಲಂಘನೆಯೇ ಅಪಘಾತಗಳಿಗೆ ಪ್ರಧಾನ ಕಾರಣವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ೮೦ರಿಂದ ೧೦೦ ಕಿ.ಮೀ. ವೇಗದಲ್ಲಿ ವಾಹನ ಚಲಾಯಿಸಬಹುದಾಗಿದೆಯಾದರೂ, ಕೆಲವರ ವಾಹನಗಳು ಅದಕ್ಕಿಂತಲೂ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸುತ್ತಿರುವುದು ಅಪಘಾತಕ್ಕೆ ಇನ್ನೊಂದು ಕಾರಣವಾಗಿದೆ. ಇಷ್ಟೆಲ್ಲಾ ಆದರೂ ಇದಕ್ಕೆ ಸಮರ್ಪಕವಾಗಿ ನಿಯಂತ್ರಿಸುವ ಕ್ರಮ ಸಂಬಂಧಪಟ್ಟವರ ವತಿಯಿಂದ ಉಂಟಾಗುತ್ತಿಲ್ಲ.