ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ಕೃಷಿಕ, ದನ ಸಾವು
ಕಾಸರಗೋಡು: ದನ ಮೇಯಿಸಲೆಂದು ಹೋದ ಹೈನುಗಾರಿಕಾ ಕೃಷಿಕ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಜೊತೆಗೆ ದನವೂ ಶಾಕ್ ತಗಲಿ ಸತ್ತಿದೆ. ಚೆಮ್ನಾಡ್ ಪಂಚಾಯತ್‌ನ ಕೋಳಿಯಡ್ಕ ವಲಯಂಕುಳಿ ಪಚ್ಚಳಂಕರೆ ವೀಟಿಲ್‌ನ ಮೇಲತ್ತ್ ಕುಂಞಕುಂಡನ್ ನಾಯರ್ ಅಲಿಯಾಸ್ ಕುಂಞುಂಡನ್ ನಾಯರ್ (84) ಸಾವನ್ನಪ್ಪಿದ ವ್ಯಕ್ತಿ.
ತಮ್ಮ ಮನೆಯಿಂದ ಸುಮಾರು 100 ಮೀಟರ್‌ನಷ್ಟು ದೂರವಿರುವ ವಯಲಂಕುಳಿಯ ಕೆ.ಕೆ. ಪಾಂಡಿ ಬಯಲಿನಲ್ಲಿ ಕುಂಞಿ ಕುಂಡನ್ ನಾಯರ್ ನಿನ್ನೆ ಬೆಳಿಗ್ಗೆ ಸುಮಾರು ಹತ್ತು ಗಂಟೆಯ ವೇಳೆಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಜತೆಗೆ ದನವೂ ಅಲ್ಲೇ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಂಞ್ಯುಂಡನ್ ನಾಯರ್ ನಿನ್ನೆ ಬೆಳಿಗ್ಗೆ 8 ಗಂಟೆಯ ವೇಳೆಗೆ ದನದೊಂದಿಗೆ ಮನೆಯಿಂದ ಹೊರಗೆ ಹೋದವರು ತಡವಾದರೂ ಮನೆಗೆ ಹಿಂತಿರುಗದೇ ಇದ್ದಾಗ ಅವರ ಪುತ್ರ ಖಾಸಗೀ ಶಾಲೆಯೊಂದರ ವಾಹನ ಚಾಲಕನಾಗಿರುವ ರಾಜೇಶ್ ಹುಡುಕಾಟದಲ್ಲಿ ತೊಡಗಿದ ವೇಳೆ ಮನೆ ಪಕ್ಕದ ಕೆ.ಕೆ. ಪಾಂಡಿ ಬಯಲಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ತಂದೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದನವೂ ಅಲ್ಲೇ ಸತ್ತು ಬಿದ್ದಿತ್ತು. ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಿಂದ ಆಗಲೂ ವಿದ್ಯುತ್ ಪ್ರವಹಿಸುತ್ತಿತ್ತು. ಅದರಿಂದಾಗಿ ಮೃತದೇಹದ ಬಳಿ ರಾಜೇಶ್‌ಗೆ ತಕ್ಷಣ ಹೋಗಲು ಸಾಧ್ಯವಾಗಲಿಲ್ಲ. ತಿಳಿಯದೇ ಅವರು ಒಂದು ವೇಳೆ ಅಲ್ಲಿಗೆ ಹೋಗುತ್ತಿದ್ದಲ್ಲಿ ಅವರೂ ಅಪಘಾತದಲ್ಲಿ ಸಿಲುಕಿ ಕೊಳ್ಳುವ ಸಾಧ್ಯತೆ ಇತ್ತು. ತಕ್ಷಣ ಲೈನ್‌ಮ್ಯಾನ್‌ನ್ನು ಕರೆದು ಸ್ವಿಚ್ ಆಫ್ ಮಾಡಿದ ಬಳಿಕವಷ್ಟೇ ಮಗ ಮತ್ತು ಇತರರು ಸೇರಿ ಕುಂಞುಂಡನ್ ನಾಯರ್‌ರನ್ನು ಆಸ್ಪತ್ರೆಗೆ ಸಾಗಿಸಿದರು. ಮೃತದೇಹವನ್ನು ನಂತರ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳ ಪಡಿಸಲಾಯಿತು. ವಿಷಯ ತಿಳಿದ ಶಾಸಕ ಸಿ.ಎಚ್. ಕುಂಞಂಬು ಹಾಗೂ ವಿವಿಧ ರಾಜಕೀಯ ಪಕ್ಷ ಗಳ ನೇತಾರರೂ ಮೃತರ ಮನೆಗೆ ಆಗಮಿಸಿ ಮನೆಯವರನ್ನು ಸಂತೈಸಿದರು.
ಮೃತರು ಪುತ್ರ ರಾಜೇಶ್‌ನ ಹೊರತಾಗಿ ಪತ್ನಿ ಕೆ. ಸಾವಿತ್ರಿ, ಇತರ ಮಕ್ಕಳಾದ ಕೆ. ಶಾಂತ, ಕೆ. ರಾಜೇಶ್ವರಿ, ಕೆ. ಶ್ಯಾಮಲ, ಅಳಿಯಂದಿರಾದ ದಿಲೀಪ್, ಮಣಿಕಂಠನ್, ಸಹೋದರಿ ಶ್ರೀದೇವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೇಲ್ಪರಂಬ ಪೊಲೀಸರು ತನಿಖೆ ನಡೆಸಿದರು.