ತುಕ್ಕು ಹಿಡಿದು ನಾಶವಾಗುತ್ತಿರುವ ಕಸ್ಟಡಿ ವಾಹನಗಳು: ಸರಕಾರಕ್ಕೆ ಲಕ್ಷಾಂತರ ರೂ. ನಷ್ಟ
ಕುಂಬಳೆ: ಕುಂಬಳೆ ಸಹಿತ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪರಿಸರದಲ್ಲಿ ರಾಶಿ ಹಾಕಿರುವ ಮಣ್ಣಿಗೆ ಹೊಂದಿಕೊಂಡು ಸಾವಿರಾರು ವಾಹನಗಳು ನಾಶವಾಗುತ್ತಿದೆ. ಹರಾಜು ಮಾಡಲು ಕ್ರಮವಿಲ್ಲದ ಕಾರಣ ತುಕ್ಕು ಹಿಡಿದು ನಾಶವಾಗುವ ಈ ವಾಹನಗಳಿಂದ ಸರಕಾರಕ್ಕೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಕಳೆದ ಮೂರು ವರ್ಷದ ಹಿಂದೆ ಜಿಲ್ಲಾಡಳಿತದ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಂದು ಸಾವಿರವರೆಗೆ ವಾಹನಗಳನ್ನು ಹರಾಜು ಮಾಡಲಾಗಿತ್ತು. ಈ ಮೂಲಕ ಸರಕಾರದ ಖಜಾನೆಗೆ ಲಕ್ಷಾಂತರ ರೂ. ಲಭಿಸಿತ್ತು. ಆದರೆ ಈಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪರಿಸರದಲ್ಲಿ ಸಾವಿರಾರು ವಾಹನಗಳು ತುಕ್ಕು ಹಿಡಿದು ನಾಶವಾಗುತ್ತಿದೆ. ಇದು ಗುಜಿರಿಗೂ ಕೂಡಾ ಬೇಡದ ಸ್ಥಿತಿಗೆ ತಲುಪಿದೆ. ಹರಾಜು ಮೂಲಕ ಇದನ್ನು ಮಾರಾಟ ಮಾಡಲು ಕ್ರಮ ಕೈಗೊಂಡಿದ್ದರೆ ಸರಕಾರಕ್ಕೆ ಲಕ್ಷಾಂತರ ರೂ. ಲಭಿಸುತ್ತಿತ್ತೆಂದು ಸ್ಥಳೀಯರು ನುಡಿಯುತ್ತಾರೆ.
ವಿವಿಧ ಪ್ರಕರಣಗಳಲ್ಲಿ ವಶಪಡಿಸಿದ, ಅನಧಿಕೃತ ಹೊಯ್ಗೆ ಸಾಗಾಟಕ್ಕೆ ಸಂಬಂಧಿಸಿ ವಶಪಡಿಸಿದ ವಾಹನಗಳು, ಅಪಘಾತಕ್ಕೀಡಾದ ವಾಹನಗಳು, ಉಪೇಕ್ಷಿತ ವಾಹನಗಳು ಎಂಬಿವು ಪೊಲೀಸ್ ಠಾಣೆ ಪರಿಸರದಲ್ಲಿ ತಂದು ಹಾಕಲಾಗಿದೆ. ಇವುಗಳಲ್ಲಿ ಟಿಪ್ಪರ್ ಲಾರಿ, ಕಾರು, ಆಟೋರಿಕ್ಷಾ, ದ್ವಿಚಕ್ರ ವಾಹನಗಳೂ ಸೇರಿವೆ. ಸಾರ್ವಜನಿಕ ಸ್ಥಳಗಳಲ್ಲಿ ತಂದು ಹಾಕಿರುವ ಈ ರೀತಿಯ ವಾಹನಗಳನ್ನು ಏಲಂ ಮಾಡಲು ರಾಜ್ಯದಲ್ಲೇ ಪ್ರಥಮವಾಗಿ ತೀರ್ಮಾನ ಕೈಗೊಂಡಿದ್ದು ಕಾಸರಗೋಡು ಜಿಲ್ಲೆಯಲ್ಲೇ ಆಗಿದೆ. 2016ರಲ್ಲಿ ಅಂದಿನ ಜಿಲ್ಲಾಧಿಕಾರಿ ಯಾಗಿದ್ದ ಡಿ. ಸುಜಿತ್ ಬಾಬು ಈ ಕ್ರಮಕ್ಕೆ ಮುಂದಾಗಿದ್ದರು.
ಬಡವರಿಗೆ ಕ್ಷೇಮ ಪಿಂಚಣಿ ಕೂಡಾ ನೀಡಲು ಸಾಧ್ಯವಾಗದೆ ಸರಕಾರ ಆರ್ಥಿಕವಾಗಿ ಕಂಗೆಟ್ಟಿರುವ ಸಂದರ್ಭದಲ್ಲಿ ಸರಕಾರಕ್ಕೆ ಲಭಿಸಬೇಕಾ ಗಿದ್ದ ಲಕ್ಷಾಂತರ ರೂ.ಗಳ ಸಂಗ್ರಹಕ್ಕೆ ಅನಾಸಕ್ತಿ ವಹಿಸುತ್ತಿರುವುದು ಜನರಲ್ಲಿ ರೋಷಕ್ಕೆ ಕಾರಣವಾಗಿದೆ. ಮಳೆಗಾಲ ಆರಂಭದೊಂದಿಗೆ ಮುಖ್ಯಮಂತ್ರಿಯ ದುರಂತ ಪರಿಹಾರ ನಿಧಿಗೆ ಮೊತ್ತ ಸಂಗ್ರಹಿಸಲು ಈ ರೀತಿ ಕಸ್ಟಡಿಗೆ ತೆಗೆದ ವಾಹನಗಳನ್ನು ಹರಾಜು ಮಾಡಬಹುದ ಲ್ಲವೇ ಎಂದು ಸ್ಥಳೀಯರು ಪ್ರಶ್ನಿಸುತ್ತಿ ದ್ದಾರೆ. ಕುಂಬಳೆಯಲ್ಲಿ ಈ ರೀತಿಯ ವಾಹನಗಳಲ್ಲಿ ವಿಷ ಜಂತುಗಳು ಕೂಡಾ ಠಿಕಾಣಿ ಹೂಡಿದ್ದು, ಇದು ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಿಗೆ ಬೆದರಿಕೆ ಉಂಟುಮಾಡುತ್ತಿದೆ.