ತೃಶೂರಿನಲ್ಲಿ ಸುರೇಶ್ಗೋಪಿ ಗೆಲುವಿನತ್ತ: ಕಾಸರಗೋಡಿನಲ್ಲಿ ಉಣ್ಣಿತ್ತಾನ್ ಮುನ್ನಡೆ
ಹೊಸದಿಲ್ಲಿ: ಲೋಕಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, ಕೇರಳದ ಎಲ್ಲರ ಭಾರೀ ಆಕರ್ಷಕ ಕೇಂದ್ರಬಿಂದುವಾಗಿರುವ ತೃಶೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ (ಎನ್ಡಿಎ) ಉಮೇದ್ವಾರ, ನಟ ಸುರೇಶ್ ಗೋಪಿ ಭಾರೀ ಮುನ್ನಡೆ ಸಾಧಿಸಿದ್ದು ಗೆಲುವಿನತ್ತ ಸಾಗಿದ್ದಾರೆ. ಮಾತ್ರವಲ್ಲ ಬಿಜೆಪಿ ಗೆಲುವಿನ ನಿರೀಕ್ಷೆ ವ್ಯಕ್ತಪಡಿಸಿರುವ ಇನ್ನೊಂದು ಕ್ಷೇತ್ರವಾದ ತಿರುವನಂತಪುರದಲ್ಲೂ ಬಿಜೆಪಿ ಮುನ್ನಡೆಯಲ್ಲಿದೆ. ಅಲ್ಲಿ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ 11223 ಮತಗಳ ಮುನ್ನಡೆಯಲ್ಲಿದ್ದಾರೆ. ಯುಡಿಎಫ್ ಅಭ್ಯರ್ಥಿ ಶಶಿ ತರೂರ್ ದ್ವಿತೀಯ ಸ್ಥಾನದಲ್ಲಿದ್ದಾರೆ. ತೃಶೂರಿನಲ್ಲಿ ಸುರೇಶ್ ಗೋಪಿ 72,763 ಮತಗಳ ಮುನ್ನಡೆಯಲ್ಲಿದ್ದಾರೆ.
ಸುರೇಶ್ ಗೋಪಿ ಹಾಗೂ ರಾಜೀವ್ ಚಂದ್ರಶೇಖರ್ ಗೆದ್ದಲ್ಲಿ ಕೇರಳದಲ್ಲಿ ಖಾತೆ ತೆರೆಯುವ ಬಿಜೆಪಿಯ ಬಹುಕಾಲದ ಆಗ್ರಹ ಈಡೇರಲಿದೆ. ಅದಕ್ಕೆ ಈಗ ಕಾಲ ಸನ್ನಿಹಿತವಾಗಿದೆ. ಇದು ಕೇರಳದ ಬಿಜೆಪಿ ವಲಯದಲ್ಲೂ ಭಾರೀ ಸಂತಸದ ಅಲೆ ಮೂಡಿಸಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಯುಡಿಎಫ್ ಉಮೇದ್ವಾರ ರಾಜ್ಮೋಹನ್ ಉಣ್ಣಿತ್ತಾನ್ ಮುನ್ನಡೆಯಲ್ಲಿದ್ದಾರೆ. ರಾಜ್ಮೋಹನ್ ಉಣ್ಣಿತ್ತಾನ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಎಲ್ಡಿಎಫ್ ಎಂ.ವಿ. ಬಾಲಕೃಷ್ಣನ್ ಮಾಸ್ತರ್ಗಿಂತ ೩೫ ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆಯಲ್ಲಿದ್ದಾರೆ. ಕೇರಳದ ಒಟ್ಟು 20 ಲೋಕಸಭಾ ಕ್ಷೇತ್ರಗಳ ಪೈಕಿ ಯುಡಿಎಫ್ 17ರಲ್ಲಿ ಮುನ್ನಡೆ ಸಾಧಿಸಿದ್ದು, ಆಡಳಿತಾರೂಢ ಎಡರಂಗಕ್ಕೆ ಆಲತ್ತೂರು ಕ್ಷೇತ್ರದಲ್ಲಿ ಮಾತ್ರವೇ ಈತನಕ ಮುನ್ನಡೆ ಸಾಧಿಸಲು ಸಾಧ್ಯವಾಗಿದೆ. ಅಲತ್ತೂರಿನಲ್ಲಿ ಎಡರಂಗ ಅಭ್ಯರ್ಥಿ ಕೆ. ರಾಧಾಕೃಷ್ಣನ್ ಅವರು 18,024 ಮತಗಳ ಮುನ್ನಡೆಯಲ್ಲಿದ್ದಾರೆ.