ತೃಶೂರು ಎಟಿಎಂ ಕಳವು: ಸೆರೆಗೀಡಾದ ಆರೋಪಿಗಳ ಕುರಿತು ಸಮಗ್ರ ತನಿಖೆ
ತೃಶೂರು: ತೃಶೂರಿನ ಮೂರು ಎಟಿಎಂಗಳನ್ನು ಕೆಡವಿ 69.43 ಲಕ್ಷ ರೂಪಾಯಿ ದೋಚಿ ಪರಾರಿಯಾಗುವ ವೇಳೆ ತಮಿಳುನಾಡಿನಲ್ಲಿ ಸೆರೆಗೀಡಾದ ಕುಖ್ಯಾತ ಕಳ್ಳರು ಕೇರಳದಲ್ಲಿ ನಡೆದ ಇನ್ನೂ ಹಲವು ಕಳವು ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆಯೇ ಎಂಬ ಕುರಿತು ತನಿಖೆ ನಡೆಸಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ. ನಿನ್ನೆ ಮುಂಜಾನೆ ತೃಶೂರಿನ ಮೂರು ಎಟಿಎಂಗಳನ್ನು ಕಳ್ಳರು ಕೆಡವಿ ಹಣದೊಂದಿಗೆ ಪರಾರಿಯಾಗಿದ್ದರು. ಈ ತಂಡವನ್ನು ತಮಿಳುನಾಡು ಪೊಲೀಸರು ಗಂಟೆಗಳೊಳಗೆ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿಯುವ ವೇಳೆ ಕಳ್ಳರ ತಂಡ ಪೊಲೀಸರ ಮೇಲೆ ಆಕ್ರಮಿಸಿದ್ದು, ಈ ವೇಳೆ ಓರ್ವನನ್ನು ಪೊಲೀಸರು ಗುಂಡಿಟ್ಟು ಹತ್ಯೆಗೈದಿದ್ದಾರೆ. ಇನ್ನೋರ್ವ ಗುಂಡು ತಗಲಿ ಗಾಯಗೊಂಡಿದ್ದಾನೆ. ಕಳ್ಳರು ನಡೆಸಿದ ಆಕ್ರಮಣದಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ಹರ್ಯಾಣದ ಪಾಲ್‌ವಾಲ್ ಜಿಲ್ಲೆಯ ನಿವಾಸಿಯೂ, ಕಂಟೈನರ್ ಲಾರಿ ಚಾಲಕನಾದ ಜಮಾಲುದ್ದೀನ್ (37) ಎಂಬಾತ ಗುಂಡೇಟು ತಗಲಿ ಸಾವಿಗೀಡಾಗಿದ್ದು, ಗಾಯಗೊಂಡ ಆಸರ್‌ಅಲಿ (30) ಎಂಬಾತನನ್ನು ಕೊಯಂಬತ್ತೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇರ್ಫಾನ್, ಸಾಬಿರ್ ಖಾನ್, ಶೌಕಿನ್, ಮುಹಮ್ಮದ್ ಇಕ್ರಾಂ, ಮುಬಾರಕ್ ಅದಂ ಎಂಬಿವರು ಸೆರೆಗೀಡಾದ ಇತರ ಆರೋಪಿಗಳಾಗಿದ್ದಾರೆ.ನಿನ್ನೆ ಮುಂಜಾನೆ ವೇಳೆ ತೃಶೂರಿನ ಮೂರು ಎಟಿಎಂಗಳಿಂದ ಹಣ ಕಳವು ನಡೆದಿತ್ತು. ಆರೋಪಿಗಳು ತಮಿಳುನಾಡಿಗೆ ಪರಾರಿಯಾದ ಬಗ್ಗೆ ತಿಳಿದ ಪೊಲೀಸರು ಅಲ್ಲಿನ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದರಂತೆ ತಮಿಳುನಾಡು ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ಪಾಲಿಸುತ್ತಿದ್ದಂತೆ ಆರೋಪಿಗಳು ಹಾಗೂ ಹಣವಿದ್ದ ಕಂಟೈನರ್ ಲಾರಿ ತಲುಪಿದೆ. ಕಾರನ್ನು ಕಂಟೈನರ್ ಲಾರಿಯೊಳಗೆ ಬಚ್ಚಿಟ್ಟು ಸಾಗಿಸಲಾಗುತ್ತಿತ್ತು. ಸನ್ಯಾಸಿ ಪಾಳಯಂ ಎಂಬಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಂತೆ ಕಂಟೈನರ್ ಲಾರಿ ಪೊಲೀಸರ ವಾಹನಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಕೂಡಲೇ ಅದನ್ನು ಬೆನ್ನಟ್ಟಿದ ಪೊಲೀಸರು ನಾಮಕ್ಕಲ್‌ನ ಬಳಿ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಆಕ್ರಮಿಸಿ ಪರಾರಿಯಾಗಲು ಕಳ್ಳರು ಯತ್ನಿಸಿದ್ದಾರೆ. ಆದರೆ ಅತೀವ ಸಾಹಸದಿಂದ ಪೊಲೀಸರು ಕಳ್ಳರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ