ಥಾಲ್ಯಾಂಡ್‌ನಿಂದ ಸಾಗಿಸಿದ 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ ಸಹಿತ 7 ಮಂದಿ ಸೆರೆ; ಕಾಸರಗೋಡು ನಿವಾಸಿಗಳೂ ಭಾಗಿ
ಕಾಸರಗೋಡು: ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಮೂರು ಕೋಟಿಗೂ ಹೆಚ್ಚು ಬೆಲೆಬಾಳುವ 3.31 ಕಿಲೋ ಹೈಡ್ರೋ ಗಾಂಜಾ ಸಹಿತ ಕಾಸರ ಗೋಡು ನಿವಾಸಿ ಸೇರಿದಂತೆ 7 ಮಂದಿಯನ್ನು ಬಂಧಿಸ ಲಾಗಿದೆ. ಜಿಲ್ಲೆಯ ನಿವಾಸಿಗಳಾದ ಮೆಹರೂಫ್ (32), ರೌಫ್ (28), ಕಣ್ಣೂರಿನ ರಿಯಾಸ್ (44), ಕಲ್ಲಿಕೋಟೆ ಎಡಪ್ಪಾಳದ ಯಾಹ್ಯ ಸಿ.ಎಚ್ (28), ಕೊಡಗು ನಿವಾಸಿಗಳಾದ ಎಂ.ಯು. ನಸರುದ್ದೀನ್ (26), ಕುಂಜಿಲದ ಅಹ್ನಾಸ್ (26), ಬೆಟೋಳಿಯ ವಾಜಿದ್ (26) ಎಂಬಿವರನ್ನು ಕೊಡಗು ಎಸ್‌ಪಿ ಕೆ. ರಾಮರಾಜರ ನೇತೃತ್ವದಲ್ಲಿರುವ ಪೊಲೀಸರ ತಂಡ ಬಂಧಿಸಿದೆ. ಥಾಲ್ಯಾಂಡ್‌ನ ಬ್ಯಾಂಕಾಕ್‌ನಿಂದ ವಿಮಾನ ಮೂಲಕ ಬೆಂಗಳೂರಿಗೆ ತಲುಪಿಸಿ ಅಲ್ಲಿಂದ ಕಾರಿನ ಮೂಲಕ ಗೋಣಿಕೊಪ್ಪಕ್ಕೆ ತಲುಪಿಸಲಾಗಿದೆ ಎಂದು ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಗೋಣಿಕೊಪ್ಪದ ಒಂದು ಹೊಟೇಲ್ ರೆಸಿಡೆನ್ಸಿಯಲ್ಲಿ ಇವರು ವಾಸವಾಗಿದ್ದರು. ಜೊತೆಯಲ್ಲಿ ಗಾಂಜಾ ಸಾಗಿಸಲು ಉಪಯೋಗಿಸಿದ ಕಾರನ್ನು ಪೊಲೀಸರು ವಶಪಡಿಸಿದ್ದಾರೆ. ಮಾದಕ ಪದಾರ್ಥ ಸಾಗಾಟದ ಸೂತ್ರಧಾರನೊಂದಿಗೆ ಇವರಿಗೆ ಸಂಬಂಧವಿದೆ ಎಂದು ಪೊಲೀಸರು ಸೂಚಿಸಿದ್ದಾರೆ. ಕಾಸರಗೋಡು ಜಿಲ್ಲೆಯ ನಿವಾಸಿಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.