ದೇರಂಬಳ ಹೊಳೆಗೆ ಯುವಕರಿಂದ ಮತ್ತೆ ಕಾಲುಸಂಕ ನಿರ್ಮಾಣ
ಉಪ್ಪಳ: ದೇರಂಬಳ ಹೊಳೆಗೆ ಅಡ್ಡವಾಗಿ ನಿರ್ಮಿಸಿದ್ದ ಸೇತುವೆ ಕುಸಿದು ಜೋಡುಕಲ್ಲು ಸಹಿತ ಈ ಪ್ರದೇಶದ ನಿವಾಸಿಗಳ ವಿವಿಧ ಕಡೆಗಿರುವ ಸಂಚಾರ ಮೊಟಕುಗೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಯುವಕರು ಮತ್ತೆ ಕಂಗಿನ ಸಂಕ ನಿರ್ಮಿಸಿದ್ದಾರೆ. ಸೇತುವೆ ಈ ಹಿಂದೆ ಕುಸಿದು ಬಿದ್ದಿದ್ದು, ಆ ಬಳಿಕ ಕಂಗಿನ ಕಾಲುಸಂಕವನ್ನು ನಿರ್ಮಿಸಲಾಗಿತ್ತು. ಆದರೆ ಇತ್ತೀಚೆಗೆ ಅದೂ ಕೂಡಾ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಇದರಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ದಿನನಿತ್ಯ ವಿವಿಧ ಕೆಲಸಗಳಿಗೆ ತೆರಳುವವರಿಗೆ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ದೇರಂಬಳದ ೧೫ರಷ್ಟು ಯುವಕರ ತಂಡ ನಿನ್ನೆ ಕಂಗು ಹಾಕಿ ಕಾಲು ಸಂಕ ನಿರ್ಮಿಸಿದ್ದಾರೆ. ಸುಮಾರು ೩೦ರಷ್ಟು ಕಂಗುಗಳನ್ನು ಇದಕ್ಕಾಗಿ ಉಪಯೋಗಿಸಲಾಗಿದೆ. ಈಗ ದೇರಂಬಳ, ಚಿಗುರುಪಾದೆ, ಬುಡ್ರಿಯ, ಕಲ್ಲಗದ್ದೆ, ತೊಟ್ಟೆತ್ತೋಡಿ, ಬೇಕೂರು, ಪೈವಳಿಕೆ, ಜೋಡುಕಲ್ಲು, ಮಡಂದೂರು ಮೊದಲಾದ ಪ್ರದೇಶಗಳ ಜನರಿಗೆ ಅತ್ತಿತ್ತ ಸಂಚರಿಸಲು ಸಾಧ್ಯವಾಗುತ್ತಿದೆ.
ಶಾಶ್ವತ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಹಲವು ಬಾರಿ ಒತ್ತಾಯಿಸಿದ್ದರೂ, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲವೆಂದು ಆರೋಪ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆನ್ನಲಾಗಿದೆ.