ದೈವಸ್ಥಾನದಲ್ಲಿ ಕಳಿಯಾಟ ಮಧ್ಯೆ ಸುಡುಮದ್ದು ದುರಂತ: 157 ಮಂದಿಗೆ ಗಾಯ; 14 ಮಂದಿ ಸ್ಥಿತಿ ಅತೀ ಗಂಭೀರ, 5 ಮಂದಿ ವೆಂಟಿಲೇಟರ್‌ನಲ್ಲಿ
ಕಾಸರಗೋಡು: ನೀಲೇಶ್ವರ ಅಂಞೂಟಂಬಲ ಶ್ರೀ ವೀರರ್ ಕಾವ್ ದೈವಸ್ಥಾನದಲ್ಲಿ ದೈವಗಳ ಕಳಿಯಾಟ ಮಹೋತ್ಸವ ನಡೆಯುತ್ತಿದ್ದಂತೆ ನಿನ್ನೆ ರಾತ್ರಿಸಂಭವಿಸಿದ ಭೀಕರ ಸುಡುಮದ್ದು ದುರಂತದಲ್ಲಿ 157 ಮಂದಿ ಗಾಯಗೊಂ ಡಿದ್ದಾರೆ. ಇವರಲ್ಲಿ 14 ಮಂದಿ ಅತೀವ ಗಂಭೀರ ಸ್ಥಿತಿಯಲ್ಲಿದ್ದಾರೆ. ಐದು ಮಂದಿಯನ್ನು ವಿವಿಧ ಆಸ್ಪತ್ರೆಗಳ ವೆಂಟಿಲೇಟರ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರನ್ನು ಕಲ್ಲಿಕೋಟೆ ಮೆಡಿಕಲ್ ಕಾಲೇಜು, ಕಲ್ಲಿಕೋಟೆ ಮಿಮ್ಸ್ ಆಸ್ಪತ್ರೆ, ಕಣ್ಣೂರು ಮಿಮ್ಸ್ ಆಸ್ಪತ್ರೆ, ಬೇಬಿ ಮೆಮೋರಿಯಲ್ ಆಸ್ಪತ್ರೆ, ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಾಞಂಗಾಡ್ ಜಿಲ್ಲಾಸ್ಪತ್ರೆ, ಐಶೋಲ್ ಆಸ್ಪತ್ರೆ, ದೀಪ ಆಸ್ಪತ್ರೆ, ಮಾವುಂಗಾಲ್‌ನ ಸಂಜೀವಿನಿ ಆಸ್ಪತ್ರೆ, ಮಂಗಳೂರಿನ ಎ.ಜೆ ಮೆಡಿಕಲ್ ಕಾಲೇಜು ಎಂಬಿಡೆಗಳಲ್ಲಿ ದಾಖಲಿಸಲಾಗಿದೆ. ಗಾಯಗೊಂಡ ವರಲ್ಲಿ ಮಹಿಳೆಯರು, ಮಕ್ಕಳು ಒಳಗೊಂಡಿದ್ದಾರೆ.
ನಿನ್ನೆ ರಾತ್ರಿ 12 ಗಂಟೆ ವೇಳೆ ಈ ದುರಂತ ಸಂಭವಿಸಿದೆ. ಶ್ರೀ ಮೂವಾಳಂಕುಯಿ ಚಾಮುಂಡಿ ದೈವದ ದರ್ಶನ ನಡೆಯುತ್ತಿದ್ದ ವೇಳೆ ಪಟಾಕಿ ಸಿಡಿಸುತ್ತಿದ್ದಾಗ ಬೆಂಕಿ ಸುಡುಮದ್ದು ದಾಸ್ತಾನು ಇರಿಸಿದ್ದ ಸ್ಥಳಕ್ಕೆ ಬಿದ್ದಿದೆ. ಇದರಿಂದ ಅಲ್ಲಿದ್ದ ಸುಡುಮದ್ದು ಒಮ್ಮೆಲೇ ಸ್ಫೋಟಗೊಂಡಿರುವುದೇ ದುರಂತಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ಕ್ಷೇತ್ರಕ್ಕೆ ಹೊಂದಿಕೊಂಡಿರುವ ಶೀಟ್ ಹಾಸಿದ ಕಟ್ಟಡದಲ್ಲಿ ಪಟಾಕಿ ದಾಸ್ತಾನಿರಿಸಲಾಗಿತ್ತು. ಅದರ ಸಮೀಪದಲ್ಲೇ ಮಹಿಳೆಯರು, ಮಕ್ಕಳ ಸಹಿತ ಸಾವಿರಾರು ಮಂದಿ ಕುಳಿತಿದ್ದರು. ಸುಡುಮದ್ದು ಸ್ಫೋಟಗೊಂಡು ಬೆಂಕಿ ಹರಡಿರುವುದೇ ಸ್ಫೋಟದ ತೀವ್ರತೆ ಹೆಚ್ಚಲು ಕಾರಣವಾಯಿತೆಂದು ತಿಳಿದುಬಂದಿದೆ. ದುರಂತ ತಕ್ಷಣ ಅಗ್ನಿಶಾಮಕದಳ, ಪೊಲೀಸರ ಸಹಿತ ಹಲವರು ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಜಿಲ್ಲಾಧಿಕಾರಿ ಕೆ. ಇಂಭಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪ, ಕಾಞಂಗಾಡ್ ಡಿವೈಎಸ್ಪಿ ಬಾಬು ಪೆರಿಂಙೋತ್, ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ. ಶಾಂತ ಮೊದಲಾದವರು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಗೆ ನೇತೃತ್ವ ನೀಡಿದರು. ಸುಡುಮದ್ದು ಸ್ಫೋಟ ದುರಂತಕ್ಕೆ ಕಾರಣ ನಿರ್ಲಕ್ಷ್ಯವೇ ಆಗಿದೆಯೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ತಿಳಿಸಿದ್ದಾರೆ. ಕನಿಷ್ಠ ಸ್ಥಳದಲ್ಲಿ ಯಾವುದೇ ಸುರಕ್ಷತೆಯಿಲ್ಲದೆ ಪಟಾಕಿಗಳನ್ನು ಸಂಗ್ರಹಿಸಿಟ್ಟಿರುವುದು ದುರಂತಕ್ಕೆ ಕಾರಣವಾಗಿದೆ. ಘಟನೆ ಕುರಿತು ಸಮಗ್ರವಾಗಿ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಎಂಟು ಮಂದಿ ವಿರುದ್ಧ ಕೇಸು: ಕ್ಷೇತ್ರ ಸಮಿತಿ ಅಧ್ಯಕ್ಷ, ಕಾರ್ಯದರ್ಶಿ ಕಸ್ಟಡಿಗೆ
ಹೊಸದುರ್ಗ: ಸುಡುಮದ್ದು ಸ್ಫೋಟ ದುರಂತಕ್ಕೆ ಸಂಬಂಧಿಸಿ ನೀಲೇಶ್ವರ ಪೊಲೀಸರು ಎಂಟು ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಕ್ಷೇತ್ರ ಸಮಿತಿ ಅಧ್ಯಕ್ಷಹಾಗೂ ಕಾರ್ಯದರ್ಶಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕಳಿಯಾಟ ಮಹೋತ್ಸವದ ಅಂಗವಾಗಿ ಪ್ರತೀ ದೈವಗಳ ದರ್ಶನ ನಡೆಯುತ್ತಿದ್ದಂತೆ ಒಂದೊಂದು ಮಾಲೆ ಪಟಾಕಿ ಸಿಡಿಸುವುದು ಇಲ್ಲಿನ ಕ್ರಮವಾಗಿದೆಯೆಂದು ಕ್ಷೇತ್ರ ಸಮಿತಿ ಪದಾಧಿಕಾರಿಗಳು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೀಗೆ ಸಿಡಿಸಲು ಇರಿಸಿದ್ದ ಪಟಾಕಿಗಳ ದಾಸ್ತಾನು ಮೇಲೆ ಬೆಂಕಿ ತಗಲಿರುವುದೇ ದುರಂತಕ್ಕೆ ಕಾರಣವೆಂದು ಅವರು ತಿಳಿಸಿದ್ದಾರೆ.
ಕಳಿಯಾಟ ವೀಕ್ಷಿಸಲು ತಲುಪಿದ್ದು 5000ಕ್ಕೂ ಹೆಚ್ಚು ಮಂದಿ
ಹೊಸದುರ್ಗ: ಕ್ಷೇತ್ರದಲ್ಲಿ ನಿನ್ನೆ ರಾತ್ರಿ ಕಳಿಯಾಟ ವೀಕ್ಷಿಸಲು ಸುಮಾರು ೫ ಸಾವಿರಕ್ಕೂ ಹೆಚ್ಚು ಮಂದಿ ತಲುಪಿದ್ದರೆಂದು ಅಂದಾಜಿ ಸಲಾಗಿದೆ. ದೈವಸ್ಥಾನದ ಅಂಗಳ ಹಾಗೂ ಪರಿಸರ ಪ್ರದೇಶಗಳಲ್ಲಾಗಿ ಮಹಿಳೆಯರು, ಮಕ್ಕಳು ಸಹಿತ ಸಾವಿರಾರು ಮಂದಿ ನೆರೆದಿದ್ದ ಸಂದರ್ಭದಲ್ಲಿ ದುರಂತ ಉಂಟಾಗಿದೆ. ಸ್ಫೋಟ ಸದ್ದು ಕೇಳಿದಾಗ ಮೊದಲು ಅದು ಪಟಾಕಿ ಸಿಡಿಸಿರುವುದಾಗಿ ಅಲ್ಲಿದ್ದವರು ಭಾವಿಸಿದ್ದರು. ಆದ್ದರಿಂದ ಯಾರೂ ಅಲ್ಲಿಂದ ತೆರವುಗೊಂಡಿಲ್ಲ. ಆದರೆ ಅನಂತರ ಭಾರೀ ಪ್ರಮಾಣದಲ್ಲಿ ಬೆಂಕಿ ಹಾಗೂ ಹೊಗೆ ಹರಡತೊಡಗಿರುವಾಗಲೇ ದುರಂತವೆಂದು ಅರಿವಿಗೆ ಬಂದಿದೆ.