ಧಾರಾಕಾರ ಮಳೆ: ಮಂಜೇಶ್ವರ ತಾಲೂಕಿನಾದ್ಯಂತ ವಿವಿಧ ಕಡೆಗಳಲ್ಲಿ ನಾಶನಷ್ಟ

ಮಂಜೇಶ್ವರ: ಧಾರಾಕಾರ ಮಳೆಗೆ ವಿವಿಧೆಡೆ ನಾಶನಷ್ಟ ಸಂಭವಿಸಿದ್ದು, ಮಂಜೇಶ್ವರ ತಾಲೂಕಿನಾದ್ಯಂತ ಗುಡ್ಡೆ ಜರಿತ, ಮನೆ ಕುಸಿತಗಳು ಸಂಭವಿಸಿವೆ. ನಿನ್ನೆ ಮಧ್ಯಾಹ್ನ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ 10ನೇ ಮೈಲ್ ನಿವಾಸಿ ನಾಸರ್ ಎಂಬವರ ಹೆಂಚು ಹಾಸಿದ ಮನೆ ಸಂಪೂರ್ಣ ಕುಸಿದಿದೆ. ಮನೆಯೊಳಗಿದ್ದವರು ಈ ವೇಳೆ ಹೊರಗೆ ಓಡಿಹೋದ ಕಾರಣ ದುರಂತ ತಪ್ಪಿದೆ.

ಸ್ಥಳಕ್ಕೆ ಸ್ಥಳೀಯರು ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ತಲುಪಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು.

ಪೈವಳಿಕೆ ಪಂಚಾಯತ್‌ನ ೧೮ನೇ ವಾರ್ಡ್‌ಗೊಳಪಟ್ಟ ಬಂಡಾರ ಎಂಬಲ್ಲಿ ಮೊಹಮ್ಮದ್ ರಫೀಕ್ ಎಂಬವರ ಎರಡು ಅಂತಸ್ತಿನ ತಾರಸಿ ಮನೆಯ ಮುಂದೆ ತಗ್ಗು ಪ್ರದೇಶದಲ್ಲಿ ಮಣ್ಣು ಜರಿದು ಬಿದ್ದು ಆವರಣಗೋಡೆ ಕುಸಿದು ಬಿದ್ದಿದೆ. ಮನೆಯ ಅಂಗಳಕ್ಕೆ ಹಾಕಿದ ಇಂಟರ್‌ಲಾಕ್ ಹಾನಿಯಾಗಿದ್ದು, ಮನೆ ಕುಸಿಯುವ ಭೀತಿ ನೆಲೆಗೊಂಡಿದೆ. ಸ್ಥಳಕ್ಕೆ ಮಂಜೇಶ್ವರ ತಹಶೀಲ್ದಾರ್ ಶ್ರೀನಿವಾಸನ್, ಹೆಡ್ ಕ್ವಾರ್ಟರ್ಸ್ ಡೆಪ್ಯುಟಿ ತಹಶೀಲ್ದಾರ್, ಮೊಹಮ್ಮದ್ ಹಾರೀಸ್, ಪೈವಳಿಕೆ ವಿಲ್ಲೇಜ್ ಆಫೀಸರ್ ಮೊಯ್ದೀನ್ ಕುಂಞಿ ಬಿ, ಪಂಚಾಯತ್ ಕಾರ್ಯದರ್ಶಿ ವಿಘ್ನೇಶ್ವರ ಭಟ್, ಕ್ರೈಂ ಬ್ರಾಂಚ್ ಪೊಲೀಸ್ ಅಧಿಕಾರಿಗಳಾದ ವಿನಯನ್, ಗೋಪಾಲನ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಮನೆಯವರು ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ, ವಾರ್ಡ್ ಪ್ರತಿನಿಧಿ ಸುನಿತಾ ವಲ್ಟಿ ಡಿಸೋಜಾ, ಮುಸ್ಲಿಂ ಲೀಗ್ ಮುಖಂಡ ಅಸೀಸ್ ಕಡಾಯಿ, ಸಿಪಿಐ ಮುಖಂಡ ವಾಲ್ಟಿ ಡಿಸೋಜ, ರವಿ ಡಿಸೋಜ, ಡಿವೈಎಫ್‌ಐ ಮುಖಂಡ ಅಬ್ದುಲ್ ಹಾರೀಸ್ ಸಹಕರಿಸಿದರು.

ಮಂಜೇಶ್ವರ ಬೀಚ್ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡ ಹಿನ್ನೆಲೆಯಲ್ಲಿ ಈ ಪರಿಸರದ ಹಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಕುಟುಂಬವನ್ನು ಸ್ಥಳಾಂತರಿಸಲಾಗಿದೆ. ಇಲ್ಲಿ ನೀರು  ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದು ನೀರು ಕಟ್ಟಿ ನಿಲ್ಲಲು ಕಾರಣವೆನ್ನಲಾಗಿದೆ. ಸೀರೆ ಶ್ರೀ ಶಂಕರನಾರಾಯಣ ದೇವಸ್ಥಾನ ಜಲಾವೃತಗೊಂಡಿದೆ. ಪರಿಸರದ ಗರ್ಭಗುಡಿ ಸುತ್ತು ನಾಲ್ಕು ಅಡಿ ಎತ್ತರದಲ್ಲಿ ನೀರು ತುಂಬಿಕೊಂಡಿತ್ತು. ಶಿರಿಯ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಕ್ಷೇತ್ರ ಸಹಿತ ಪರಿಸರ ಪ್ರದೇಶಗಳು ಜಲಾವೃತಗೊಂಡಿದೆ.

ಕುಬಣೂರು ಸುವರ್ಣಗಿರಿ ಹೊಳೆ ತುಂಬಿ ಪರಿಸರದ ಶ್ರೀ ಶಾಸ್ತಾವು ಕ್ಷೇತ್ರ ಹಾಗೂ ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಭಂಡಾರ ಮನೆ ಜಲಾವೃತ ಗೊಂಡಿದೆ. ಈ ಪ್ರದೇಶದ ತಗ್ಗು ಪ್ರದೇಶಗಳಲ್ಲಿ ನೀರು ಕಟ್ಟಿ ನಿಂತಿದೆ.

You cannot copy contents of this page