ನಕಲಿ ಪಾಸ್‌ಪೋರ್ಟ್ ಸಂಪಾದಿಸಿ ಇಸ್ರೇಲ್‌ಗೆ ಸಾಗುವ ಬಾಂಗ್ಲಾ ತಂಡ ಕೇರಳದಲ್ಲಿ ಸಕ್ರಿಯ
ಕಾಸರಗೋಡು: ಭಾರತದೊಳಗೆ ಅಕ್ರಮವಾಗಿ ನುಸುಳಿ ಬಂದು ನಕಲಿ ಭಾರತೀಯ ಪಾಸ್‌ಪೋರ್ಟ್ ಸಂಪಾದಿಸಿ ಅದರ ಹೆಸರಲ್ಲಿ ನಾವೂ ಭಾರತೀಯರೆಂಬ ಸೋಗಿನಲ್ಲಿ ವಿದೇಶಕ್ಕೆ ಸಾಗುವ ಜಾಲವೊಂದು ಕೇರಳದಲ್ಲಿ ಸಕ್ರಿಯವಾಗಿ ಕಾರ್ಯವೆಸಗುತ್ತಿರುವುದಾಗಿ ಕೇಂದ್ರ ಗುಪ್ತಚರ ವಿಭಾಗಕ್ಕೆ ಸ್ಪಷ್ಟ ಮಾಹಿತಿ ಲಭಿಸಿದೆ.
ಈ ರೀತಿ ನಕಲಿ ಭಾರತೀಯ ಪಾಸ್‌ಪೋರ್ಟ್ ಸಂಪಾದಿಸಿ ಇಸ್ರೇಲ್‌ಗೆ ಸಾಗಲೆತ್ನಿಸಿದ 12 ಬಾಂಗ್ಲಾ ಪ್ರಜೆಗಳು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಇಸ್ರೇಲ್‌ಗೆ ಸಾಗಿರುವುದಾಗಿ ಕೇಂದ್ರ ಗುಪ್ತಚರ ವಿಭಾಗಕ್ಕೆ ಸ್ಪಷ್ಟ ಮಾಹಿತಿ ಲಭಿಸಿದೆ. ಈ ರೀತಿ ನಕಲಿ ಭಾರತೀಯ ಪಾಸ್‌ಪೋರ್ಟ್‌ನೊಂದಿಗೆ ಇಸ್ರೇಲ್‌ಗೆ ಸಾಗಲೆತ್ನಿಸಿದ ಬಾಂಗ್ಲಾ ದೇಶದ ಪ್ರಜೆಯೋರ್ವನನ್ನು ತಿರುವನಂತಪುರ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ. ತನಿಖಾ ತಂಡಗಳು ಆತನನ್ನು ಸಮಗ್ರವಾಗಿ ವಿಚಾರಣೆಗೊಳ ಪಡಿಸಿದಾಗ ತನ್ನ ಹಾಗೆ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ನುಸುಳಿ ಬಂದು ಇಲ್ಲಿನ ಪಾಸ್ ಪೋರ್ಟ್ ಸಂಪಾದಿಸಿ ಅದೆಷ್ಟೋ ಮಂದಿ ಬಾಂಗ್ಲಾ ಪ್ರಜೆಗಳು ತಿರುವನಂತಪುರ ವಿಮಾನ ನಿಲ್ದಾಣದಿಂದ ಇಸ್ರೇಲ್‌ಗೆ ಸಾಗಿರುವುದಾಗಿಯೂ ಆತ ಬಾಯ್ಬಿಟ್ಟಿ ದ್ದಾನೆ. ಮಾತ್ರವಲ್ಲ ಇದನ್ನು ಇಸ್ರೇಲ್ ಸರಕಾರವು ಗಂಭೀರವಾಗಿ ಪರಿಗಣಿಸಿ ಇಂಟರ್‌ಪೋಲ್‌ನ ಸಹಾಯದಿಂದ ಬಂಧಿತ ವ್ಯಕ್ತಿಯನ್ನು ತೀವ್ರ ವಿಚಾರಣೆಗೊಳಪಡಿಸುತ್ತಿದೆ. ಇದು ಮಾತ್ರವಲ್ಲದೆ 2021ರ ಬಳಿಕ ಕೇರಳೀಯರೂ ಸೇರಿದಂತೆ 140 ಮಂದಿ ನಕಲಿ ಭಾರತೀಯ ಪಾಸ್‌ಪೋರ್ಟ್ ಬಳಸಿ ಇಸ್ರೇಲ್‌ಗೆ ಸಾಗಿರುವುದಾಗಿಯೂ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಹೀಗೆ ಸಾಗಿದವರಲ್ಲಿ 8 ಮಂದಿಯನ್ನು ಇಸ್ರೇಲ್‌ನಲ್ಲಿ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಹೀಗೆ ಅಲ್ಲಿ ಸಿಕ್ಕಿಬಿದ್ದವರಲ್ಲಿ ಆರು ಮಂದಿ ಕೇರಳೀಯರಾಗಿದ್ದಾರೆ. ಬಾಂಗ್ಲಾದೇಶದವರಿಗಾಗಿ ನಕಲಿ ಭಾರತೀಯ ಪಾಸ್‌ಪೋರ್ಟ್ ತಯಾರಿಸಿ ನೀಡುವ ವ್ಯಕ್ತಿ ಕಣ್ಣೂರು ನಿವಾಸಿಯಾಗಿರುವುದಾಗಿಯೂ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಈ ಬಗ್ಗೆ ಕೇರಳ ಕ್ರೈಂ ಬ್ರಾಂಚ್ ವಿಭಾಗ ಕೂಡಾ ಸಮಗ್ರ ತನಿಖೆ ಆರಂಭಿಸಿದೆ.ತಿರುವನಂತಪುರ ಮಾತ್ರವಲ್ಲ ಕೊಚ್ಚಿ ಮತ್ತಿತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲ ಕವೂ ಬಾಂಗ್ಲಾ ದೇಶಿಗರು ನಕಲಿ ಪಾಸ್‌ಪೋರ್ಟ್ ನೊಂದಿಗೆ ವಿದೇಶಕ್ಕೆ ಸಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂತಹ ನಕಲಿ ಪಾಸ್‌ಪೋರ್ಟ್ ತಯಾರಿ ಕೇಂದ್ರವೊಂದು ಕಾರ್ಯವೆಸಗುತ್ತಿದೆ. ಅಲ್ಲಿ ಬಾಂಗ್ಲಾ ದೇಶೀಯರು ಮಾತ್ರವಲ್ಲ ಇತರ ದೇಶದ ಪ್ರಜೆಗಳಿಗೂ ನಕಲಿ ಪಾಸ್‌ಪೋರ್ಟ್ ತಯಾರಿಸಿ ನೀಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದ್ದು, ಆ ಹಿನ್ನೆಲೆಯಲ್ಲಿ ಇದನ್ನು ಕೇಂದ್ರ ಗೃಹ ಸಚಿವಾಲಯ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ನಿರ್ದೇಶ ನೀಡಿದೆ