ನಕಲಿ ಪ್ರಮಾಣಪತ್ರ ತಯಾರಿ ಕೇಂದ್ರ: ಕೇರಳ ಮಾತ್ರವಲ್ಲದೆ ಹೊರ ರಾಜ್ಯಗಳು, ವಿದೇಶಗಳಲ್ಲೂ ದಲ್ಲಾಳಿಗಳು
ಕಾಸರಗೋಡು: ಹೊಸದುರ್ಗ ದಲ್ಲಿ ನಕಲಿ ಪ್ರಮಾಣಪತ್ರ ಹಾಗೂ ಇತರ ದಾಖಲುಪತ್ರಗಳನ್ನು ನಿರ್ಮಿಸಿ ಕೊಡುವ ಕೇಂದ್ರ ಪತ್ತೆಯಾದ ಬೆನ್ನಲ್ಲೇ ಆ ಬಗ್ಗೆ ನಡೆಸಿದ ತನಿಖೆಯಲ್ಲಿ ಈ ಕೇಂದ್ರ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಮಂಗಳೂರು, ಚೆನ್ನೈ, ಮುಂಬೈ ಮತ್ತು ದುಬಾಯಿಯಲ್ಲಿ ದಲ್ಲಾಳಿಗಳನ್ನು ಹೊಂದಿದೆ ಎಂದೂ ಅವರ ಮೂಲಕವೂ ಸಹಸ್ರಾರು ನಕಲಿ ಪ್ರಮಾಣ ಪತ್ರಗಳನ್ನು ವಿತರಿಸಿದೆ ಎಂಬ ಸ್ಪಷ್ಟ ಮಾಹಿತಿಗಳು ಲಭಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ವಿವಿಧ ವಿಶ್ವವಿದ್ಯಾಲಯಗಳ ಸರ್ಟಿಫಿಕೇಟ್ಗಳು, ಆಧಾರ್ ಕಾರ್ಡ್, ಪಾಸ್ಪೋರ್ಟ್, ಡ್ರೈವಿಂಗ್ ಲೈಸನ್ಸ್ ಇತ್ಯಾದಿಗಳ ಹೊರತಾಗಿ ನಕಲಿ ಎಂಬಿಬಿಎಸ್ ಸರ್ಟಿಫಿಕೇಟ್ಗಳನ್ನು ತಯಾರಿಸುತ್ತಿದೆ. ಹೀಗೆ ನಕಲಿ ಎಂಬಿಬಿಎಸ್ ಸರ್ಟಿಫಿಕೇಟ್ಗಳು ಬೇಕಾಗಿದ್ದಲ್ಲಿ ಅದಕ್ಕೆ 60,000 ರೂ. ತನಕ ಹಣ ವಸೂಲಿ ಮಾಡಲಾಗುತ್ತಿದೆ.
ಕಳೆದ ಎರಡು ವರ್ಷಗಳಿಂದ ಈ ನಕಲಿ ಪ್ರಮಾಣಪತ್ರ ನಿರ್ಮಾಣ ಕೇಂದ್ರ ಕಾರ್ಯವೆಸಗುತ್ತಿದೆ. ಇಲ್ಲಿಂದ ಸಹಸ್ರಾರು ಮಂದಿ ನಕಲಿ ಪ್ರಮಾಣಪತ್ರ ಪಡೆದಿದ್ದಾರೆ. ಇವರಲ್ಲಿ ಹೆಚ್ಚಿನವರು ವಿದೇಶದಲ್ಲಿ ಹಾಗೂ ಹೊರ ರಾಜ್ಯ ಗಳಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದಾರೆ. ಎಸ್ಎಸ್ಎಲ್ಸಿ ಅನುತ್ತೀರ್ಣರಾದ ವರಿಗೂ ಈ ಕೇಂದ್ರದಿಂದ ನಕಲಿ ಇಂಜಿನಿಯರಿಂಗ್ ಸರ್ಟಿಫಿಕೇಟ್ ನೀಡಲಾಗಿದೆ. ಕೇರಳ ಮಾತ್ರವಲ್ಲ ಕರ್ನಾಟಕದ ಹಲವು ಆರ್ಡಿಒ ಕಚೇರಿಗಳ ಹೆಸರಲ್ಲೂ ಈ ಕೇಂದ್ರದಲ್ಲಿ ನಕಲಿ ಡ್ರೈವಿಂಗ್ ಲೈಸನ್ಸ್ ತಯಾರಿಸಿ ಹಲವರಿಗೆ ವಿತರಿಸಲಾಗಿದೆ. ನಕಲಿ ಇಂಜಿನಿಯರಿಂಗ್ ಸರ್ಟಿಫಿಕೇಟ್ಗಾಗಿ ಹಲವರು ಈ ಕೇಂದ್ರವನ್ನು ಸಂಪರ್ಕಿಸಿದ್ದರು. ಇದಕ್ಕೆ 3೦,೦೦೦ ರೂ. ಶುಲ್ಕ ವಸೂಲಿ ಮಾಡಲಾಗು ತ್ತಿದೆ. ಪ್ರತೀ ಸೆಮಿಸ್ಟರ್ ಪರೀಕ್ಷೆಗಳ ನಕಲಿ ಸರ್ಟಿಫಿಕೇಟ್ಗಳಿಗೆ ತಲಾ 6೦೦೦ ರೂ.ನಂತೆ ವಸೂಲಿ ಮಾಡಲಾಗುತ್ತಿದೆ. ನಕಲಿ ಪದವಿ ಸರ್ಟಿಫಿಕೇಟ್ಗೆ 15,೦೦೦ ರೂ., ಸ್ನಾತಕೋತ್ತರ ಸರ್ಟಿಫಿಕೇಟ್ಗೆ 3೦,೦೦೦ ರೂ. ಈ ತಂಡ ವಸೂಲಿ ಮಾಡುತ್ತಿದೆ. ಹೀಗೆ ನಕಲಿ ಸರ್ಟಿಫಿಕೇಟ್ ಅಗತ್ಯವಿರು ವವರು ತಮ್ಮ ಫೋಟೋ, ವಿಳಾಸ ತಂದು ನೀಡುವ ಜತೆಗೆ ತಮಗೆ ಯಾವ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಅಗತ್ಯವಿದೆ ಎಂದು ತಿಳಿಸಿ ಅದಕ್ಕಾಗಿ ಹಣ ನೀಡಿದ ಮೂರನೇ ದಿನ ನಕಲಿ ಸರ್ಟಿಫಿಕೇಟ್ ಅವರಿಗೆ ಈ ಕೇಂದ್ರದಿಂದ ಕೈಸೇರುತ್ತಿದೆ ಎಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಈ ನಕಲಿ ಪ್ರಮಾಣಪತ್ರ ನಿರ್ಮಾಣ ಕೇಂದ್ರದಿಂದ ಪೊಲೀಸರು ಪ್ರಿಂಟರ್, ನಕಲಿ ಮೊಹರುಗಳು, ಸರ್ಟಿಫಿಕೇಟ್ ತಯಾರಿಸಲು ಬಳಸುವ ಕಾಗದ ಇತ್ಯಾದಿಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳಾದ ಹೊಸದುರ್ಗ ಕಡಪ್ಪುರದ ಶಿಹಾಬ್ (38), ಹೊಸದುರ್ಗ ಮುಳಿಕ್ಕಾಂ ಕ್ಲಾಯಿಕ್ಕೋಡಿನ ಪಿ. ರವೀಂದ್ರನ್ (51) ಮತ್ತು ಹೊಸದುರ್ಗ ಕೊವ್ವಲ್ಪಳ್ಳಿಯ ಸಂತೋಷ್ ಕುಮಾರ್ (45) ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಅವರನ್ನು ನ್ಯಾಯಾಂಗ ಬಂಧನದಿಂದ ಮತ್ತೆ ಕಸ್ಟಡಿಗೆ ಪಡೆಯಲಾಗುವುದೆಂದೂ ಪೊಲೀಸರು ತಿಳಿಸಿದ್ದಾರೆ. ಮಾತ್ರವಲ್ಲ ಪ್ರಕರಣದ ಸಮಗ್ರ ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ.
ಆರೋಪಿಗಳಲ್ಲೋರ್ವನಾದ ಶಿಹಾಬ್ ನಕಲಿ ಪಾಸ್ಪೋರ್ಟ್ ಪ್ರಕರಣದಲ್ಲೂ ಆರೋಪಿ
ಕಾಸರಗೋಡು: ಹೊಸದುರ್ಗದ ನಕಲಿ ಪ್ರಮಾಣಪತ್ರ ನಿರ್ಮಾಣ ಕೇಂದ್ರ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಆರೋಪಿಗಳ ಪೈಕಿ ಹೊಸದುರ್ಗ ಕಡಪ್ಪುರದ ಶಿಹಾಬ್ (38) 2014ರಲ್ಲಿ ಕರಿಪ್ಪೂರ್ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಕಲಿ ಪಾಸ್ ಪೋರ್ಟ್ನೊಂದಿಗೆ ಬಂಧಿಸಲಾಗಿತ್ತು. ಅದಕ್ಕೆ ಸಂಬಂಧಿಸಿ ಆತನ ವಿರುದ್ಧ ಕೇಸು ದಾಖಲಿಸಲಾಗಿತ್ತು. ಆ ಪ್ರಕರಣ ಈಗಲೂ ನೆಲೆಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ.