ನಗರದ ರಸ್ತೆಯ ವಿವಿಧೆಡೆ ಹೊಂಡಗಳು: ಸಂಚಾರಕ್ಕೆ ತೊಡಕು
ಕಾಸರಗೋಡು: ನಗರದ ಕರಂದಕ್ಕಾಡ್‌ನಿಂದ ರೈಲ್ವೇ ನಿಲ್ದಾಣಕ್ಕೆ ತೆರಳುವ ರಸ್ತೆಯ ವಿವಿಧೆಡೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗಿದೆ. ಹೊಂಡಗಳಿಗೆ ಬಿದ್ದು ವಾಹನಗಳಿಗೆ ಹಾನಿ ಸಂಭವಿಸುವುದು ನಿತ್ಯ ಘಟನೆಯಾಗಿದೆ. ದ್ವಿಚಕ್ರ ವಾಹನಗಳು ಈ ಹೊಂಡಕ್ಕೆ ಬಿದ್ದು ಸವಾರರು ಗಾಯಗೊಳ್ಳುತ್ತಿದ್ದಾರೆ. ಈ ರಸ್ತೆಯಲ್ಲಿ ಬೀಚ್ ರೋಡ್ ಜಂಕ್ಷನ್, ಕೆಎಸ್‌ಆರ್‌ಟಿಸಿ ಮುಂಭಾಗ ಸಹಿತ ವಿವಿಧೆಡೆಗಳಲ್ಲಿ ಹೊಂಡಗಳು ಸೃಷ್ಟಿಯಾ ಗಿವೆ. ಮಳೆ ಸುರಿಯುವ ವೇಳೆ ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಈ ವೇಳೆ ಹೊಂಡಗಳು ಗಮನಕ್ಕೆ ಬಾರದೆ ವಾಹನಗಳು ಅದಕ್ಕೆ ಬೀಳುತ್ತಿರುವು ದರಿಂದ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆಯಲ್ಲಿ ಸೃಷ್ಟಿಯಾದ ಹೊಂಡಗಳಿಂದಾಗಿ ವಾಹನಗಳಿಗೆ ಸಂಚರಿಸಲಾಗದೆ ತೀವ್ರ ಸಾರಿಗೆ ಅಡಚಣೆ ಉಂಟಾಗುತ್ತಿದ್ದು ಇದರಿಂದ ರೈಲ್ವೇ ನಿಲ್ದಾಣಕ್ಕೆ ತೆರಳುವವರಿಗೆ ತೀವ್ರ ಸಮಸ್ಯೆ ಎದುರಾಗುತ್ತಿದೆ. ಹೊಂಡಗಳಿಗೆ ಬಿದ್ದು ಸಾವುನೋವು ಸಂಭವಿಸಿದರೆ ಮಾತ್ರವೇ ರಸ್ತೆಯ ದುರಸ್ತಿ ಎಂಬ ನಿಲುವನ್ನು ಸಂಬಂಧಪಟ್ಟ ಅಧಿಕಾರಿಗಳು ಕೈಬಿಡಬೇಕೆಂದು ನಾಗರಿಕರು ತಿಳಿಸುತ್ತಿದ್ದಾರೆ.