ನಗ್ನ ಫೋಟೋ ಪ್ರಚಾರ ಮಾಡುವುದಾಗಿ ಬೆದರಿಸಿಯುವಕನಿಂದ 10 ಲಕ್ಷ ರೂ. ಎಗರಿಸಿದ ಆರೋಪಿ ಸೆರೆ
ಬದಿಯಡ್ಕ: ಸಾಮಾಜಿಕ ಜಾಲತಾಣ ಮೂಲಕ ಪರಿಚಯಗೊಂಡ ಬದಿಯಡ್ಕ ಬಳಿಯ ನಿವಾಸಿಯಾಗಿರುವ ಯುವಕನಿಂದ ನಗ್ನ ಚಿತ್ರ ಹಾಗೂ ವೀಡಿಯೋ ಕಾಲ್‌ಗಳನ್ನು ಪಡೆದು ಬಳಿಕ ಅದನ್ನು ಆತನಿಗೆ ತಿಳಿಯದೆ ರೆಕಾರ್ಡ್ ಮಾಡಿ ಅದನ್ನು ವಾಟ್ಸಪ್ ಇತ್ಯಾದಿಗಳ ಮೂಲಕ ಪ್ರಚಾರ ಮಾಡುವುದಾಗಿ ಬೆದರಿಸಿ ಆತನಿಂದ ಹಲವು ಬಾರಿಯಾಗಿ 10,05,000 ರೂ. ಎಗರಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಕೊಳಂಬೆ ತಿಮ್ಮಪ್ಪಶ್ರುತಿ ನಿವಾಸಿ ಅಶ್ವತ್ಥ್ ಆಚಾರ್ಯ (30) ಬಂಧಿತ ಆರೋಪಿ. ಹಣ ಕಳೆದುಕೊಂಡ ಯುವಕ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಇ. ಅನೂಪ್ ಕುಮಾರ್ ನೇತೃತ್ವದ ಪೊಲೀಸರ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಬಳಿಕ ಬದಿಯಡ್ಕ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೀಡಿದ ನಿರ್ದೇಶ ಪ್ರಕಾರ ಇನ್‌ಸ್ಪೆಕ್ಟರ್ ಇ. ಅನೂಪ್ ಕುಮಾರ್ ನೇತೃತ್ವದ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಮಧು, ಅಬ್ದುಲ್ ಸಲಾಂ, ಸಿವಿಲ್ ಪೊಲೀಸ್ ಆಫೀಸ ರ್‌ಗಳಾದ ಸಂದೀಪ್, ವಿಜಯನ್ ಮತ್ತು ಅಶ್ವಿಂತ್ ಎಂಬವರನ್ನೊಳಗೊಂಡ ಪೊಲೀಸರ ತಂಡ ಆರೋಪಿಯನ್ನು ಕರ್ನಾಟಕದಿಂದ ಪತ್ತೆಹಚ್ಚಿ ಬಂಧಿಸಿದೆ.
ತಾನು ಓರ್ವ ಯಕ್ಷಗಾನ ಕಲಾಗಾರನಾಗಿರುವುದಾಗಿ ತಿಳಿಸಿ ದೂರುಗಾರನಾದ ಯುವಕನನ್ನು ಆರೋಪಿ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ, ಅದರ ಹೆಸರಲ್ಲಿ ಸೌಹಾರ್ದ ಬೆಳೆಸಿದ್ದನು. ಬಳಿಕ ಈ ಯುವಕ ಕಳುಹಿಸಿಕೊಟ್ಟ ನಗ್ನ ಚಿತ್ರಗಳು ಮತ್ತು ವೀಡಿಯೋ ಕಾಲ್‌ಗಳನ್ನು ಆತನಿಗೆ ತಿಳಿಯದೆ ರೆಕಾರ್ಡ್ ಮಾಡಿ ಅದನ್ನು ಇತರರಿಗೆ ಶೇರ್ ಮಾಡುವುದಾಗಿ ಯುವಕನಿಗೆ ಬೆದರಿಕೆಯೊಡ್ಡಿ ಆತನಿಂದ 2024 ನವಂಬರ್ 26ರಿಂದ ಆರಂಭಗೊಂಡು 2024 ಡಿಸೆಂಬರ್ 4ರ ನಡುವಿನ ಅವಧಿಯಲ್ಲಿ ಆರೋಪಿ ಗೂಗಲ್ ಹಾಗೂ ಅಕೌಂಟ್ ಟ್ರಾನ್ಸ್‌ಫರ್ ಮೂಲಕ 10,05,000 ರೂ. ಎಗರಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆ ಯುವಕ ಆರೋಪಿಸಿದ್ದರು.