ನಟಿಯರಿಗೆ ಲೈಂಗಿಕ ಕಿರುಕುಳ: ಬಂಧಿತ ಮುಖೇಶ್‌ಗೆ ಜಾಮೀನು, ಸಿದ್ದಿಕ್ ಸುಪ್ರೀಂಕೋರ್ಟ್‌ಗೆ

ಕೊಚ್ಚಿ: ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿ ಹೆಸರಿಸಲಾಗಿರುವ ನಟ ಹಾಗೂ ಸಿಪಿಎಂ ಶಾಸಕ ಎಂ. ಮುಖೇಶ್‌ರನ್ನು ಎರ್ನಾಕುಳಂ ಮರೈನ್ ಡ್ರೈವ್ ಕರಾವಳಿ ಪೊಲೀಸರು ನಿನ್ನೆ ಪೊಲೀಸ್ ಠಾಣೆಗೆ ಕರೆಸಿ ಅವರ ಹೇಳಿಕೆ ದಾಖಲಿಸಿಕೊಂಡ ಬಳಿಕ ಅವರ ಬಂಧಿಸಿ ದಾಖಲಿಸಿಕೊಂಡಿದ್ದಾರೆ.

ಆ ಬಳಿಕ ಪೊಲೀಸರು ಮುಖೇಶ್‌ರನ್ನು ಎರ್ನಾಕುಳಂ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ನಂತರ ನ್ಯಾಯಾಲಯ ಮುಖೇಶ್‌ರಿಗೆ ಜಾಮೀನು ಮಂಜೂರು ಮಾಡಿದೆ. ಸಿನೆಮಾದಲ್ಲಿ ಅಭಿನಯಿಸಲು ಅವಕಾಶ ನೀಡುವುದಾಗಿ ಮರಟಿ ಎಂಬಲ್ಲಿನ ಸಿನೆಮಾ ಶೂಟಿಂಗ್ ಲೊಕೇಷನ್‌ನಲ್ಲೂ, ನಂತರ ಕಾರಿನಲ್ಲಿ ತನ್ನನ್ನು ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವುದಾಗಿ ನಟಿಯೋರ್ವೆ ನೀಡಿದ ದೂರಿನಂತೆ ಮುಖೇಶ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇದೇ ರೀತಿ ಲೈಂಗಿಕ ಕಿರುಕುಳದಲ್ಲಿ ಆರೋಪಿಯಾಗಿರುವ ನಟ ಸಿದ್ದೀಕ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ನಿನ್ನೆ ತಿರಸ್ಕರಿಸಿತ್ತು, ಆ ಬಳಿಕ ಸಿದ್ದೀಕ್ ದಿಢೀರ್ ಆಗಿ ಅಪ್ರತ್ಯಕ್ಷಗೊಂಡಿದ್ದಾರೆ. ಅವರ ಮೊಬೈಲ್ ಫೋನ್ ಕೂಡಾ ಈಗ ಸ್ವಿಚ್ ಆಫ್‌ಗೊಂಡ ಸ್ಥಿತಿಯಲ್ಲಿದೆ. ಸಿದ್ದೀಕ್‌ರನ್ನು ಬಂಧಿಸಲು ಕಾಕನಾಡು ಪೊಲೀಸರು ವ್ಯಾಪಕ ಶೋಧ ನಡೆಸಿದ್ದರೂ ಅದು ಸಫಲವಾಗಲಿಲ್ಲ. ಅದರಿಂದ ಸಿದ್ದೀಕ್‌ರ ಪತ್ತೆಗಾಗಿ ಪೊಲೀಸರು ಈಗ ಲುಕ್-ಔಟ್ ನೋಟೀಸ್ ಜ್ಯಾರಿಗೊಳಿಸಿದ್ದಾರೆ.

ತಲೆಮರೆಸಿಕೊಂಡಿರುವ ನಟ ಸಿದ್ದೀಕ್ ಇನ್ನೊಂದೆಡೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದು, ಅದರಂತೆ ಅವರು ಇಂದೇ ಅರ್ಜಿ ಸಲ್ಲಿಸುವ ಸಾಧ್ಯತೆಯಲ್ಲಿ ತೊಡಗಿದ್ದಾರೆನ್ನಲಾಗಿದೆ. ಇನ್ನೊಂದೆಡೆ ಸಿದ್ದೀಕ್‌ಗೆ ನಿರೀಕ್ಷಣಾ ಜಾಮೀನು ನೀಡದಂತೆ ಈ ಪ್ರಕರಣದ   ದೂರುಗಾರಳಾದ ಸಂತ್ರಸ್ಥೆ ಸುಪ್ರೀಂಕೋರ್ಟ್‌ಗೆ ತಟಸ್ತ ಅರ್ಜಿ ಸಲ್ಲಿಸಿದ್ದಾರೆ.

You cannot copy contents of this page