ನಡೆದು ಹೋಗುತ್ತಿದ್ದ ಯುವತಿಯನ್ನು ಅಪ್ಪಿಹಿಡಿದು ಬಳಿಕ ಪರಾರಿಯಾದ ಯುವಕನ ಬಂಧನ
ಕುಂಬಳೆ: ನಡೆದುಹೋಗುತ್ತಿದ್ದ ಹದಿನೆಂಟರ ಹರೆಯದ ಯುವತಿ ಯನ್ನು ಅಪ್ಪಿ ಹಿಡಿದು ಬಳಿಕ ಓಡಿ ಪರಾರಿಯಾದ ಯುವಕನನ್ನು ನಾಗರಿಕರು ಸೆರೆಹಿಡಿದು ಬುದ್ದಿ ಹೇಳಿ ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ.
ಕರ್ನಾಟಕದ ಸಕಲೇಶಪುರ ನಿವಾಸಿಯೂ ಕುಂಬಳೆ ಆರಿಕ್ಕಾಡಿ ಕಡವತ್ತ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಶುಹೈಬ್ (25) ಎಂಬಾತನನ್ನು ಸೆರೆಹಿಡಿದು ನಾಗರಿಕರು ಕುಂಬಳೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ತಿಂಗಳ 24ರಂದು ಹಾಡಹಗಲೇ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ.
ಕುಂಬಳೆ ರೈಲ್ವೇ ನಿಲ್ದಾಣ ರಸ್ತೆಯಲ್ಲಿ ಯುವತಿ ನಡೆದು ಹೋಗುತ್ತಿದ್ದಳು. ಈ ವೇಳೆ ಅಲ್ಲಿಗೆ ತಲುಪಿದ ಆರೋಪಿ ಶುಹೈಬ್ ಯುವತಿಯನ್ನು ಅಪ್ಪಿ ಹಿಡಿದಿದ್ದನು. ಅಷ್ಟರಲ್ಲಿ ಯುವತಿ ಬೊಬ್ಬೆ ಹಾಕಿದಾಗ ಆರೋಪಿ ಓಡಿ ಪರಾರಿಯಾಗಿದ್ದನು.
ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದರು. ಇದೇ ವೇಳೆ ಯುವತಿಯನ್ನು ಆರೋಪಿ ಬಿಗಿದಪ್ಪುವ ದೃಶ್ಯ ರೈಲ್ವೇ ನಿಲ್ದಾಣ ಬಳಿಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ದೃಶ್ಯದಲ್ಲಿರುವ ಆರೋಪಿಯ ಚಿತ್ರವನ್ನು ಕೇಂದ್ರೀಕರಿಸಿ ನಾಗರಿಕರು ಶೋಧ ನಡೆಸುತ್ತಿರುವ ಮಧ್ಯೆ ಆರೋಪಿ ನಿನ್ನೆ ರಾತ್ರಿ ಕುಂಬಳೆ ಪೇಟೆಯಲ್ಲಿ ಕಂಡುಬಂದಿದ್ದಾನೆ. ಕೂಡಲೇ ಯುವಕನನ್ನು ಸೆರೆಹಿಡಿದ ನಾಗರಿಕರು ದೂರುದಾತೆಯಾದ ಯುವತಿಯನ್ನು ಕುಂಬಳೆ ಪೇಟೆಗೆ ಕರೆದುಕೊಂಡು ಬಂದು ಅತಿಕ್ರಮಣ ನಡೆಸಿರುವುದು ಸೆರೆಗೀಡಾದ ಯುವಕನೆಂದು ಖಾತರಿಪಡಿಸಿದ ಬಳಿಕ ಪೊಲೀಸರಿಗೆ ಹಸ್ತಾಂತರಿಸ ಲಾಯಿತು. ಆರೋಪಿಯನ್ನು ತನಿಖೆಗೊಳಪಡಿಸಲಾಗುತ್ತಿದೆಯೆಂದೂ ಇದೇ ರೀತಿಯ ಬೇರೆ ಯಾವುದಾ ದರೂ ಪ್ರಕರಣಗಳು ಈತನ ವಿರುದ್ಧ ಇದೆಯೇ ಎಂದು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.